ಬೆಳಗಾವಿಯ ವೀರಭದ್ರ ನಗರದ ಉರ್ದು ಶಾಲಾ ಮತಗಟ್ಟೆಯಲ್ಲಿ ಅಲ್ಪಸಂಖ್ಯಾತರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಮೊಹ್ಮದ್ ರೋಷನ್ ಸ್ಪಷ್ಟನೆ ನೀಡಿದ್ದಾರೆ. ಬಲ್ಕ್ ಅರ್ಜಿಗಳ ಸಲ್ಲಿಕೆ ಹಾಗೂ ಚುನಾವಣಾ ಆಯೋಗದ ಮಾರ್ಗಸೂಚಿಗಳ ಕುರಿತು ಅವರು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.

ಬೆಳಗಾವಿಯ ವೀರಭದ್ರ ನಗರದ ಉರ್ದು ಶಾಲೆಯ ಪೋಲಿಂಗ್ ಸ್ಟೇಷನ್‌ನಲ್ಲಿ ನಮೂನೆ 7 ರಡಿ ಬಲ್ಕ್ ಆಕ್ಷೇಪಣೆಗಳನ್ನು ಸಲ್ಲಿಕೆ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಮೊಹ್ಮದ್ ರೋಷನ್ ಪ್ರತಿಕ್ರಿಯಿಸಿದ್ದು, ಪ್ರಸ್ತುತ ಯಾವುದೇ ಮತಗಳು ಡಿಲೀಟ್ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕ್ಲೈಮ್ಸ್ ಮತ್ತು ಆಕ್ಷೇಪಣೆಗಳ ಅವಧಿಯಲ್ಲಿ ಯಾರೇ ಆಗಲಿ ಫಾರ್ಮ್ 7 ಸಲ್ಲಿಸಲು ಅವಕಾಶವಿದ್ದರೂ, ಚುನಾವಣಾ ಆಯೋಗದ ನಿಯಮಗಳ ಪ್ರಕಾರ ಒಬ್ಬ ವ್ಯಕ್ತಿ ಒಂದು ಮತಕ್ಷೇತ್ರದಲ್ಲಿ 5 ಜನರನ್ನು ಮೀರಿ ಆಬ್ಜೆಕ್ಟರ್ ಆಗಿ ಅರ್ಜಿ ಸಲ್ಲಿಸಿದರೆ ಅದನ್ನು ಅಪ್ರೂವ್ ಮಾಡುವ ಅಧಿಕಾರ ಬಿಎಲ್‌ಒಗೆ ಇರುವುದಿಲ್ಲ. ಬದಲಿಗೆ ಇಆರ್‌ಒ (ERO) ಖುದ್ದಾಗಿ ಪ್ರಿಲಿಮಿನರಿ ಎನ್‌ಕ್ವೈರಿ ನಡೆಸಿ, ಸೂಕ್ತ ಸಾಕ್ಷ್ಯಾಧಾರ ಹಾಗೂ ಡಿಕ್ಲರೇಷನ್ ಪರಿಶೀಲಿಸಬೇಕಾಗುತ್ತದೆ. ಆದರೆ ಈ ಪ್ರಕರಣದಲ್ಲಿ ಯಾವುದೇ ಹಿನ್ನೆಲೆ ದಾಖಲೆಗಳಿಲ್ಲದೆ ಬರೀ ಬಲ್ಕ್ ಫಾರ್ಮ್ 7 ಗಳು ಬಂದಿದ್ದವು ಎಂದರು.
ಯಾವುದೇ ಮತಗಟ್ಟೆಯಲ್ಲಿ ಶೇಕಡಾ 2 ಕ್ಕಿಂತ ಹೆಚ್ಚು ಮತದಾರರ ಮೇಲೆ ಆಕ್ಷೇಪಣೆ ಬಂದರೆ ತಕ್ಷಣ ಸ್ವೀಕರಿಸಲು ಬರುವುದಿಲ್ಲ ಹಾಗೂ ‘ಬರ್ಡನ್ ಆಫ್ ಪ್ರೂಫ್’ ಆಬ್ಜೆಕ್ಟ್ ಮಾಡುವವರ ಮೇಲಿರುತ್ತದೆ ಎಂದು ಡಿಸಿ ತಿಳಿಸಿದ್ದಾರೆ. ಈ ಕುರಿತು ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಿ ಸೌಹಾರ್ದಯುತ ಚರ್ಚೆ ನಡೆಸಲಾಗಿದ್ದು, ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ಎಚ್ಚರಿಕೆ ವಹಿಸಲಾಗಿದೆ. ತನಿಖಾ ವರದಿ ಅಂತಿಮಗೊಂಡ ಬಳಿಕ ಪ್ರಾತಿನಿಧಿಕ ಜನರ ಕಾಯ್ದೆಯ ಸೆಕ್ಷನ್ 31 ರಡಿ ಕ್ರಮ ಕೈಗೊಳ್ಳಲು ಇಆರ್‌ಒಗೆ ಅಧಿಕಾರವಿದೆ ಎಂದು ಅವರು ಮಾಹಿತಿ ನೀಡಿದರು.
