Vijaypura

ವಿಜಯಪುರ ಸಂಪೂರ್ಣ ಜಿಲ್ಲೆ ಬರಪೀಡಿತ ಘೋಷಣೆಗೆ ಪಟ್ಟು ಸರ್ಕಾರದ ವಿರುದ್ಧ ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಆಕ್ರೋಶ; ರೈತರಿಗೆ ಎಕರೆಗೆ ₹50 ಸಾವಿರ ಪರಿಹಾರಕ್ಕೆ ಆಗ್ರಹ

Share

ಬರಗಾಲದಿಂದ ತೀವ್ರ ನಲುಗಿರುವ ವಿಜಯಪುರ ಜಿಲ್ಲೆಯನ್ನು ಸಂಪೂರ್ಣ ಬರಪೀಡಿತ ಜಿಲ್ಲೆಯೆಂದು ಘೋಷಿಸಿ ರೈತರಿಗೆ ತಕ್ಷಣ ಪರಿಹಾರ ಒದಗಿಸಬೇಕು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಆಗ್ರಹಿಸಿದರು. ವಿಜಯಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯ ಇಂಡಿ ಹಾಗೂ ಚಡಚಣ ತಾಲೂಕುಗಳನ್ನು ಇನ್ನೂ ಬರಪೀಡಿತ ತಾಲೂಕುಗಳೆಂದು ಘೋಷಿಸಿಲ್ಲ. ಕಬ್ಬು ಬೆಳೆಗಾರರ ಬಗ್ಗೆ ಕಾಳಜಿ ವಹಿಸುವ ಸರ್ಕಾರಕ್ಕೆ ಇಂಡಿ ಮತ್ತು ಚಡಚಣ ಭಾಗದ ಪ್ರಮುಖ ಲಿಂಬೆ ಬೆಳೆಗಾರರ ಸಂಕಷ್ಟ ಏಕೆ ಕಾಣುತ್ತಿಲ್ಲ ಎಂದು ಪ್ರಶ್ನಿಸಿದರು. ಜಿಲ್ಲೆಯ ಇಂಡಿ ಹಾಗೂ ನಾಗಠಾಣ ಕ್ಷೇತ್ರದ ಶಾಸಕರು ಬರದ ವಿಚಾರದಲ್ಲಿ ಸರ್ಕಾರದ ವಿರುದ್ಧ ಧ್ವನಿ ಎತ್ತಬೇಕು. ಅಗತ್ಯವಿದ್ದರೆ ಇಂಡಿ ಶಾಸಕರು ರಾಜೀನಾಮೆ ನೀಡುವ ಎಚ್ಚರಿಕೆಯನ್ನಾದರೂ ನೀಡಿ ರೈತರ ಪರವಾಗಿ ಒತ್ತಡ ಹೇರಬೇಕು. ಶಾಸಕರು ಸದನದಲ್ಲಿ ಈ ಕುರಿತು ಧ್ವನಿ ಎತ್ತುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ ಎಂದು ನಡಹಳ್ಳಿ ಹೇಳಿದರು. ಜಿಲ್ಲೆಯಲ್ಲಿ ದ್ರಾಕ್ಷಿ, ಲಿಂಬೆ, ಬಾಳೆ ಸೇರಿದಂತೆ ಬಹುವಾರ್ಷಿಕ ಬೆಳೆಗಳು ತೀವ್ರ ಹಾನಿಗೊಳಗಾಗಿವೆ. ಈ ಬೆಳೆಗಳಿಗೆ ವಿಶೇಷ ಸಮೀಕ್ಷೆ ನಡೆಸಿ ನಷ್ಟವನ್ನು ದಾಖಲಿಸಬೇಕು. ರೈತರು ಆತ್ಮಹತ್ಯೆಯಂತಹ ದುಃಖದ ಪರಿಸ್ಥಿತಿಗೆ ತಲುಪುವ ಮುನ್ನ ಸರ್ಕಾರ ತುರ್ತು ನೆರವು ನೀಡಬೇಕು ಎಂದು ಒತ್ತಾಯಿಸಿದರು. ರೈತರಿಗೆ ಉಚಿತ ನೀರು, ಉಚಿತ ಮೇವು ಹಾಗೂ ಉಚಿತ ವಿದ್ಯುತ್ ನೀಡಬೇಕು. ಪ್ರತಿ ಎಕರೆಗೆ ಕನಿಷ್ಠ ₹50 ಸಾವಿರ ಪರಿಹಾರ ನೀಡಬೇಕು. ಬೆಳೆಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು. ಅಧಿವೇಶನ ದಲ್ಲಿಯೂ ಬರದ ಕುರಿತು ಗಂಭೀರ ಚರ್ಚೆ ನಡೆದಿಲ್ಲ.

ಮುಂದಿನ ದಿನಗಳಲ್ಲಿ ಈ ವಿಚಾರವನ್ನು ಗಂಭೀರವಾಗಿ ಚರ್ಚಿಸುವ ನಿರೀಕ್ಷೆಯಿದೆ. ಬರದ ವಿಚಾರದಲ್ಲಿ ಕಂದಾಯ ಇಲಾಖೆ ಸಚಿವರು ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಹೆಸರಿನಲ್ಲಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಬಾರದು ಎಂದು ನಡಹಳ್ಳಿ ಆರೋಪಿಸಿದರು. ರಾಜ್ಯದ ಖಜಾನೆಯಲ್ಲಿ ಹಣದ ಕೊರತೆಯಿಲ್ಲ. ಅನಗತ್ಯ ಹಾಗೂ ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ ರೈತರ ನೆರವಿಗೆ ಸರ್ಕಾರ ಹಣ ಬಳಸಬೇಕು. ಕೇಂದ್ರ ಸರ್ಕಾರದ ಬಳಿ ರಾಜ್ಯದ ಪರವಾಗಿ ಸರ್ವಪಕ್ಷಗಳ ನಿಯೋಗವನ್ನು ಕೊಂಡೊಯ್ದು ಬರ ಪರಿಹಾರಕ್ಕೆ ಒತ್ತಾಯಿಸ ಬೇಕು ಎಂದರು. ಬರದ ವಿಚಾರದಲ್ಲಿ ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಸರ್ಕಾರ ಸುಳ್ಳು ಹೇಳಬಾರದು. ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ನಡಹಳ್ಳಿ ಎಚ್ಚರಿಸಿದರು. ನಾಳೆ ಅಧಿವೇಶನದಲ್ಲಿ ಬರದ ಕುರಿತು ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದನ್ನು ನೋಡಿಕೊಂಡು ಮುಂದಿನ ಹೋರಾಟದ ರೂಪುರೇಷೆ ನಿರ್ಧರಿಸಲಾಗುವುದು. ಅಗತ್ಯವಿದ್ದರೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಂಸದ ರಮೇಶ ಜಿಗಜಿಣಗಿ, ಮಹಾನಗರ ಪಾಲಿಕೆ ಮಹಾಪೌರ ಎಂ.ಎಸ್. ಕರಡಿ, ಮಾಜಿ ಶಾಸಕ ರಮೇಶ ಭೂಸನೂರ, ಮುಖಂಡರಾದ ಉಮೇಶ ಕಾರಜೋಳ, ವಿಜುಗೌಡ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:

error: Content is protected !!