ಬಸವಣ್ಣನವರ ತತ್ವಗಳು ವಿಶ್ವವ್ಯಾಪಿಯಾಗುವುದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಆದರೆ ಅವುಗಳನ್ನು ತಿರುಚುವ ಅಥವಾ ವಿರೂಪಗೊಳಿಸುವ ಪ್ರಯತ್ನಗಳು ನಡೆದರೆ ಸಹಿಸುವುದಿಲ್ಲ ಎಂದು ಜಾಗತಿಕ ಲಿಂಗಾಯತ ಮಹಾಸಭೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್.ಎಂ. ಜಾಮದಾರ್ ಸ್ಪಷ್ಟಪಡಿಸಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಾಗತಿಕ ಲಿಂಗಾಯತ ಮಹಾಸಭೆಯ ಪ್ರಧಾನ ಕಾರ್ಯದರ್ಶಿ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಡಾ. ಎಸ್.ಎಂ. ಜಾಮದಾರ್ ಅವರು, ಬಸವ ಭಾರತ ಅಭಿಯಾನ ಮತ್ತು ಮುಂಬರುವ ಲಿಂಗಾಯತ ಜನಗಣತಿಯ ರೂಪುರೇಷೆಗಳ ಬಗ್ಗೆ ವಿವರಣೆ ನೀಡಿದರು. ಬಿಜೆಪಿ ಮುಖಂಡ ಅಮಿತ್ ಶಾಹ ಉದ್ಘಾಟಿಸಿರುವ ಬಸವ ಭಾರತ ಅಭಿಯಾನಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಆ ಕಾರ್ಯಕ್ರಮದ ಹೆಸರಿನಲ್ಲಿ ಬಸವ ತತ್ವಗಳನ್ನು ತಿರುಚಿ, ಹಿಂದೂತ್ವದ ಅಂಶಗಳನ್ನು ಸೇರಿಸಲು ಅಥವಾ ಮಠಗಳನ್ನು ತಪ್ಪಾಗಿ ಬಿಂಬಿಸಲು ಪ್ರಯತ್ನಿಸಿದರೆ ಅದನ್ನು ಬಲವಾಗಿ ವಿರೋಧಿಸುವುದಾಗಿ ಅವರು ಎಚ್ಚರಿಸಿದರು. ಬಸವಣ್ಣನವರ ವಚನಗಳ ಆಧಾರದ ಮೇಲೆ ಲಿಂಗಾಯತ ಧರ್ಮದಲ್ಲಿ 16 ವಿಭಿನ್ನ ಸಂಸ್ಕಾರಗಳಿದ್ದು, ವೈದಿಕ ಸಂಸ್ಕಾರಗಳಿಂದ ಇವು ಸಂಪೂರ್ಣ ಭಿನ್ನವಾಗಿವೆ ಎಂದು ಅವರು ತಿಳಿಸಿದರು.
ಮುಂದುವರಿದು ಮಾತನಾಡಿದ ಅವರು, ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕೇರಳ ರಾಜ್ಯಗಳಲ್ಲಿ ಲಿಂಗಾಯತ ಜನಗಣತಿ ಹಾಗೂ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಫೆಬ್ರವರಿ 1 ರಿಂದ ಫೆಬ್ರವರಿ 28, 2027 ರವರೆಗೆ ಸುಮಾರು 28 ದಿನಗಳ ಕಾಲ ನಡೆಯಲಿರುವ ಈ ಅಭಿಯಾನದ ಮೂಲಕ, ಲಿಂಗಾಯತರು ತಮ್ಮ ಜಾತಿ ಮತ್ತು ಧರ್ಮವನ್ನು ಸರಿಯಾಗಿ ನಮೂದಿಸುವಂತೆ ಮನೆಮನೆಗೆ ತೆರಳಿ ಜಾಗೃತಿ ಮೂಡಿಸಲಾಗುವುದು. ಜನಗಣತಿ ನಮೂನೆಯಲ್ಲಿ ಸ್ಪಷ್ಟತೆ ಸಿಗುವವರೆಗೆ ಈ ಅಭಿಯಾನ ನಿರಂತರವಾಗಿ ಮುಂದುವರಿಯಲಿದೆ ಎಂದ ಅವರು, ಲಿಂಗಾಯತ ಆಚಾರ-ವಿಚಾರಗಳನ್ನು ಶುದ್ಧೀಕರಿಸಿ ಜನರ ಮುಂದಿಡಲು “ಲಿಂಗಾಯತ ಧರ್ಮದ ಆಚರಣೆಗಳು” ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
