ವಿಜಯಪುರ ಜಿಲ್ಲೆಯಲ್ಲಿ ಬರದ ಪರಿಸ್ಥಿತಿ ತೀವ್ರವಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆ ಕೈಕೊಟ್ಟು, ಜಾನುವಾರುಗಳಿಗೆ ಮೇವು- ನೀರಿನ ಸಮಸ್ಯೆ ಎದುರಾಗಿದೆ. ಈ ನಡುವೆ ಸಂಪೂರ್ಣ ಜಿಲ್ಲೆಯನ್ನು ತೀವ್ರ ಬರಪೀಡಿತ ಪ್ರದೇಶವೆಂದು ಘೋಷಿಸಿ, ರೈತರಿಗೆ ತಕ್ಷಣ ಪರಿಹಾರ ನೀಡುವಂತೆ ಆಗ್ರಹಿಸಿ ಬಿಜೆಪಿ ರೈತ ಮೋರ್ಚಾ ಧರಣಿ ನಡೆಸಿದೆ. ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಪ್ರತಿಭಟನಾ ಕಾರರು, ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವರ ವಿರುದ್ಧವೂ ಅಸಮಾಧಾನ ಹೊರಹಾಕಿದ್ದಾರೆ. ರೈತರ ಪ್ರಮುಖ ಬೇಡಿಕೆಗಳೇನು? ಸರ್ಕಾರದ ವಿರುದ್ಧ ಯಾಕೆ ಆಕ್ರೋಶ? ಇಲ್ಲಿದೆ ಸಂಪೂರ್ಣ ವರದಿ…


ಇದು ಬರದ ಹೊಡೆತಕ್ಕೆ ಸಿಲುಕಿರುವ ವಿಜಯಪುರ ಜಿಲ್ಲೆಯ ರೈತರ ಸ್ಥಿತಿ… ಮಳೆ ಕೈಕೊಟ್ಟ ಪರಿಣಾಮ ಹೊಲದಲ್ಲಿನ ಬೆಳೆ ಒಣಗಿದ್ದು, ಹಾಕಿದ ಬಂಡವಾಳವೂ ವಾಪಸ್ ಬಾರದ ಸ್ಥಿತಿ ನಿರ್ಮಾಣವಾಗಿದೆ. ಒಂದೆಡೆ ಬೆಳೆ ನಷ್ಟ… ಮತ್ತೊಂದೆಡೆ ಸಾಲದ ಹೊರೆ… ಹೀಗಾಗಿ ಅನ್ನದಾತರು ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ. ರೈತರ ಸಂಕಷ್ಟಕ್ಕೆ ತಕ್ಷಣ ಸ್ಪಂದಿಸುವಂತೆ ಆಗ್ರಹಿಸಿ ವಿಜಯಪುರ ನಗರದ ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ ರೈತ ಮೋರ್ಚಾ ಧರಣಿ ಸತ್ಯಾಗ್ರಹ ನಡೆಸುತ್ತಿದೆ. ಸಂಪೂರ್ಣ ವಿಜಯಪುರ ಜಿಲ್ಲೆಯನ್ನು ತೀವ್ರ ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಬರದಿಂದ ಬೆಳೆ ಕಳೆದುಕೊಂಡ ರೈತರಿಗೆ ಪ್ರತಿ ಎಕರೆಗೆ 50 ಸಾವಿರ ರೂಪಾಯಿ ಪರಿಹಾರ ನೀಡಬೇಕು. ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು. ಬಾಕಿ ಇರುವ ಬೆಳೆ ವಿಮಾ ಮೊತ್ತವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ. ಇದರ ಜೊತೆಗೆ ಜಾನುವಾರುಗಳಿಗೆ ಸಮರ್ಪಕ ಮೇವು, ಕುಡಿಯುವ ನೀರು ಹಾಗೂ ಅಗತ್ಯ ಪಶುಸಂಗೋಪನಾ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಲಾಯಿತು.

ಅಲ್ಲದೇ ಸರ್ಕಾರ ಕೇವಲ ಬರ ಘೋಷಣೆ ಮತ್ತು ಪರಿಹಾರದ ಭರವಸೆ ನೀಡುವುದಕ್ಕೆ ಸೀಮಿತವಾಗದೆ, ರೈತರ ಹೊಲಗಳಿಗೆ ನೇರವಾಗಿ ತಲುಪುವಂತಹ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಇನ್ನೂ ವಿಜಯಪುರ ಜಿಲ್ಲೆಯ ಯಾವುದೇ ಪ್ರದೇಶದಲ್ಲಿ ಹೊಲದಲ್ಲಿ ಬೆಳೆ ಇಲ್ಲ… ಕೈಯಲ್ಲಿ ಆದಾಯವಿಲ್ಲ… ಆದರೆ ರೈತರ ತಲೆಯ ಮೇಲಿನ ಸಾಲ ಮಾತ್ರ ಹಾಗೆಯೇ ಇದೆ. ಜಾನುವಾರು ಸಾಕಿರುವ ರೈತರಿಗೆ ಮೇವು ಮತ್ತು ನೀರಿನ ಚಿಂತೆಯೂ ಎದುರಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಸರ್ಕಾರದ ನೆರವು ಸಿಗಬೇಕಿತ್ತು. ಆದರೆ ನಿರೀಕ್ಷಿತ ಮಟ್ಟದಲ್ಲಿ ಸ್ಪಂದನೆ ಸಿಗುತ್ತಿಲ್ಲ ಎಂಬುದು ರೈತರ ಅಳಲಾಗಿದೆ. ರೈತರ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಆರೋಪಿಸಿರುವ ಬಿಜೆಪಿ ರೈತ ಮೋರ್ಚಾ ಮುಖಂಡರು, ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವರೂ ಜಿಲ್ಲೆಯ ಬರ ಪರಿಸ್ಥಿತಿಯ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಆಗ್ರಹಿಸಿದ್ದಾರೆ. ರೈತರ ಸಂಕಷ್ಟದ ಸಂದರ್ಭದಲ್ಲಿ ರಾಜಕೀಯ ಆರೋಪ-ಪ್ರತ್ಯಾರೋಪಕ್ಕಿಂತ ಪರಿಹಾರ ಕಾರ್ಯಗಳಿಗೆ ಆದ್ಯತೆ ನೀಡಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.
ಒಟ್ನಲ್ಲಿ ಬರದ ಹೊಡೆತಕ್ಕೆ ಸಿಲುಕಿರುವ ರೈತರಿಗೆ ಈಗ ಬೇಕಿರುವುದು ಕೇವಲ ಭರವಸೆಯಲ್ಲ… ಬದುಕು ಕಟ್ಟಿಕೊಳ್ಳಲು ಸರ್ಕಾರದ ನೇರ ನೆರವು. ಒಣಗಿದ ಹೊಲಗಳಿಗೆ ಪರಿಹಾರ, ರೈತರ ಸಾಲದ ಹೊರೆಯಿಂದ ಮುಕ್ತಿ… ಜಾನುವಾರುಗಳಿಗೆ ಮೇವು-ನೀರು… ಬೆಳೆ ವಿಮೆ ಸೇರಿದಂತೆ ರೈತರ ಬೇಡಿಕೆಗಳಿಗೆ ಸರ್ಕಾರ ಶೀಘ್ರ ಸ್ಪಂದಿಸಬೇಕಿದೆ. ಅನ್ನದಾತನ ಸಂಕಷ್ಟವನ್ನು ಅರ್ಥ ಮಾಡಿಕೊಂಡು, ಸರ್ಕಾರ ರೈತರ ನೆರವಿಗೆ ತಕ್ಷಣ ಮುಂದೆ ಬರಲಿ ಎಂಬುದೇ ರೈತರ ಒತ್ತಾಯವಾಗಿದೆ.
ವಿಜಯಕುಮಾರ ಸಾರವಾಡ,
ಇನ್ ನ್ಯೂಜ್,
ವಿಜಯಪುರ.
