ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ಇತರೆ ಇಲಾಖೆ ಹಾಗೂ ವಿಭಿನ್ನ ಪದವೀಧರರಿಗೂ ಅವಕಾಶ ನೀಡಿರುವುದನ್ನು ಖಂಡಿಸಿ, ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನಡೆಸುತ್ತಿರುವ ಹೋರಾಟ ಇಂದಿಗೆ 21ನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರದ ಈ ನಿರ್ಧಾರವನ್ನು ತಕ್ಷಣವೇ ಹಿಂಪಡೆಯುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಇದೀಗ ಅಹೋರಾತ್ರಿ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ.

ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಮುಖ್ಯ ಪ್ರವೇಶ ದ್ವಾರ ಹಾಗೂ ಆಡಳಿತ ಭವನದ ಮುಂಭಾಗದಲ್ಲಿ ವಿದ್ಯಾರ್ಥಿಗಳ ಆಕ್ರೋಶ ಮುಂದುವರಿದಿದೆ. ಆರಂಭದಲ್ಲಿ ಸಾಂಕೇತಿಕ ಧರಣಿಗೆಷ್ಟೇ ಸೀಮಿತವಾಗಿದ್ದ ಹೋರಾಟ, ಸರ್ಕಾರದಿಂದ ಸೂಕ್ತ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಈಗ ಉಪವಾಸ ಸತ್ಯಾಗ್ರಹದ ರೂಪ ಪಡೆದುಕೊಂಡಿದೆ.
ರಾಜ್ಯ ಸರ್ಕಾರ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳ ವಿಫಲ ನೀತಿಯ ವಿರುದ್ಧ ವಿದ್ಯಾರ್ಥಿಗಳು ತೀವ್ರ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಈ ನಡುವೆ, ಉಪವಾಸ ಕುಳಿತಿದ್ದ ಓರ್ವ ವಿದ್ಯಾರ್ಥಿನಿ ಮುಂಜಾನೆ ಆಹಾರ ಸೇವಿಸದ ಹಿನ್ನೆಲೆಯಲ್ಲಿ ಅಸ್ವಸ್ಥಗೊಂಡಿದ್ದು, ಸ್ಥಳಕ್ಕೆ ಆಗಮಿಸಿದ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ.
“ಕೃಷಿ ಅಧಿಕಾರಿ ನೇಮಕಾತಿಯಲ್ಲಿ ಇತರೆ ಪದವೀಧರರಿಗೆ ನೀಡಿರುವ ಅವಕಾಶವನ್ನು ಸರ್ಕಾರ ತಕ್ಷಣವೇ ಕೈಬಿಡಬೇಕು. ಕೃಷಿ ಪದವಿ ಪಡೆದವರಿಗೆ ಮಾತ್ರ ಮೊದಲ ಆದ್ಯತೆ ನೀಡಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುತ್ತೇವೆ” ಎಂದು ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದ್ದಾರೆ.
