ದೇಶಾದ್ಯಂತ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆಮಾಡಿದ್ದರೂ ತಮಗೆ ಮಾತ್ರ ಇನ್ನೂ ನಿಜವಾದ ಸ್ವಾತಂತ್ರ್ಯ ಸಿಕ್ಕಿಲ್ಲ ಎಂದು ಬೆಳಗಾವಿಯ ಪೌರಕಾರ್ಮಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಕ್ಕುಪತ್ರ, ವಸತಿ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಫಾಯಿ ಕರ್ಮಚಾರಿ ಸಂಘಟನೆಯ ವತಿಯಿಂದ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಫಾಯಿ ಕರ್ಮಚಾರಿ ಸಂಘಟನೆಯ ವತಿಯಿಂದ ಇಂದು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಿವೃತ್ತ ಪೌರಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸಲಾಗಿದ್ದರೂ, ಬೆಳಗಾವಿಯಲ್ಲಿ ಮಾತ್ರ ಬರೀ ಭರವಸೆಗಳಷ್ಟೇ ಸಿಗುತ್ತಿದ್ದು ಅನುಷ್ಠಾನಕ್ಕೆ ಬರುತ್ತಿಲ್ಲ ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಸಮಿತಿ ಸದಸ್ಯ ವಿಜಯ್ ನಿರಗಟ್ಟಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ಸುವರ್ಣಸೌಧ ಅಧಿವೇಶನ ಹಾಗೂ ಪೌರಕಾರ್ಮಿಕರ ದಿನಾಚರಣೆ ವೇಳೆಯೂ ಪ್ರತಿಭಟನೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಸ್ವತಃ ಜಿಲ್ಲಾಧಿಕಾರಿಗಳೇ ನಿರ್ದೇಶನ ನೀಡಿದ್ದರೂ ಮಹಾನಗರ ಪಾಲಿಕೆ ಆಯುಕ್ತರು ಸ್ಪಂದಿಸುತ್ತಿಲ್ಲ ಎಂದು ದೂರಿದ ಅವರು, ಬೇರೆ ದಾರಿ ಕಾಣದೆ ನಿರುಪಾಯರಾಗಿ ಪೌರಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಹೋರಾಟಕ್ಕಿಳಿಯುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಇನ್ನು ಸಫಾಯಿ ಕರ್ಮಚಾರಿ ಸಂಘಟನೆಯ ಜಿಲ್ಲಾಧ್ಯಕ್ಷ ದೀಪಕ್ ವಾಘೇಲಾ ಅವರು ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಳೆದ 30 ವರ್ಷಗಳಿಂದ ವಾಸಿಸುತ್ತಿರುವ ಪೌರಕಾರ್ಮಿಕರಿಗೆ ಕ್ವಾರ್ಟರ್ಸ್ ಹಾಗೂ ಹಕ್ಕುಪತ್ರ ಮಂಜೂರು ಮಾಡುವಲ್ಲಿ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ ಎಂದು ಲಾ ಆರೋಪಿಸಿದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿಗಳು ಪೌರಕಾರ್ಮಿಕರ ಪರವಾಗಿ ಆದೇಶ ನೀಡಿದ್ದರೂ, ಪಾಲಿಕೆ ಕಮಿಷನರ್ ಕಳೆದ ಒಂದು ವರ್ಷದಿಂದ ನಿರ್ಲಕ್ಷ್ಯ ವಹಿಸಿದ್ದಾರೆ. ಒಟ್ಟು 55 ಅರ್ಜಿಗಳಲ್ಲಿ 25 ಜನರಿಗೆ ಮಾತ್ರ ಹಕ್ಕುಪತ್ರ ನೀಡಲಾಗಿದ್ದು, ಇನ್ನುಳಿದ 253 ಪೌರಕಾರ್ಮಿಕರ ಸಮಸ್ಯೆಗಳು ಇತ್ಯರ್ಥವಾಗದೇ ಉಳಿದಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ದಾವಣಗೆರೆ ಮಾದರಿಯಲ್ಲೇ ಬೆಳಗಾವಿಯಲ್ಲೂ ಪೌರಕಾರ್ಮಿಕರಿಗೆ ಕ್ವಾರ್ಟರ್ಸ್ ಸೌಲಭ್ಯ ಕಲ್ಪಿಸಬೇಕು. ಬರುವ ಆಗಸ್ಟ್ 15ರ ಒಳಗಾಗಿ ಈ ಸಮಸ್ಯೆ ಬಗೆಹರಿಯದಿದ್ದರೆ, ಕಿತ್ತೂರು ಚೆನ್ನಮ್ಮ ವೃತ್ತದ ಬಳಿ ಸಫಾಯಿ ಕರ್ಮಚಾರಿ ಸಂಘಟನೆಯ ಗೌರವಾಧ್ಯಕ್ಷ ಮುನಿಸ್ವಾಮಿ ಭಂಡಾರಿ ಅವರೊಂದಿಗೆ ಬೃಹತ್ ಧರಣಿ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

