Belagavi

ಬರಗಾಲ ನಿರ್ವಹಣೆಯಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲ ಕೇವಲ ಮಂತ್ರಿಗಿರಿಗಾಗಿ ದೆಹಲಿ ಟು ಬೆಂಗಳೂರು ಪ್ರವಾಸ; ಎಂ.ಎಲ್.ಸಿ ಲಿಂಗರಾಜ್ ಪಾಟೀಲ್

Share

ರಾಜ್ಯ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕಾಗಿ ಆಟವಾಡುತ್ತಿದೆಯೇ ವಿನಃ ರಾಜ್ಯದ ಬರಗಾಲ ಮತ್ತು ಯುವಕರ ನಿರುದ್ಯೋಗ ಸಮಸ್ಯೆಗಳ ಕಡೆಗೆ ಗಮನ ಹರಿಸುತ್ತಿಲ್ಲ ಎಂದು ಬಿಜೆಪಿಯ ಎಂ.ಎಲ್.ಸಿ ಲಿಂಗರಾಜ್ ಪಾಟೀಲ್ ಗಂಭೀರವಾಗಿ ಆರೋಪಿಸಿದ್ದಾರೆ.
ಇಂದು ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ತೀವ್ರ ಬರಗಾಲ ತಲೆದೋರಿದ್ದರೂ ಕಾಂಗ್ರೆಸ್ ಸರ್ಕಾರ ಮಂತ್ರಿಗಿರಿ ಮತ್ತು ಸಚಿವ ಸಂಪುಟ ವಿಸ್ತರಣೆಗಾಗಿ ದೆಹಲಿ-ಬೆಂಗಳೂರು ನಡುವೆ ಪ್ರವಾಸ ಮಾಡುವುದರಲ್ಲೇ ನಿರತವಾಗಿದೆ. ಗಜಪ್ರಸವದಂತೆ ಎರಡು ತಿಂಗಳ ನಂತರ ಸಂಪುಟ ವಿಸ್ತರಣೆ ಮಾಡಿದ್ದರೂ, ಹಲವು ಶಾಸಕರಲ್ಲಿ ಅಸಮಾಧಾನ ಹೊಗೆಯಾಡುತ್ತಿದ್ದು, ಮುಂದಿನ ಎರಡು ವರ್ಷಗಳ ಕಾಲವೂ ಈ ಸರ್ಕಾರ ಗೊಂದಲದಲ್ಲೇ ಆಡಳಿತ ನಡೆಸುವ ಲಕ್ಷಣಗಳಿವೆ ಎಂದರು. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ಜನರಿಗೆ ಒಳ್ಳೆಯ ಆಡಳಿತ ನೀಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಬರ ಪರಿಹಾರ ಮತ್ತು ಯೋಜನೆಗಳ ಬಗ್ಗೆ ಸರ್ಕಾರಕ್ಕೆ ಯಾವುದೇ ಸ್ಪಷ್ಟತೆಯಿಲ್ಲ, ನಿರುದ್ಯೋಗ ಸಮಸ್ಯೆ ಹೆಚ್ಚಾಗಿದ್ದರೂ ಹುದ್ದೆಗಳ ನೇಮಕಾತಿ ಮಾಡದೆ ಯುವಕರ ಪ್ರತಿಭಟನೆಯನ್ನು ಹತ್ತಿಕ್ಕಲಾಗುತ್ತಿದೆ ಎಂದು ಸರ್ಕಾರದ ವಿರುದ್ಧ ಕಟು ವಾಗ್ದಾಳಿ ನಡೆಸಿದರು. ಬೈಟ್
ಇನ್ನು ಇದೇ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತೀನ್ ನಬೀನ್ ಅವರ ಕರೆಯಂತೆ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ತತ್ವದಡಿ ಆಗಸ್ಟ್ 13 ರಿಂದ 15 ರವರೆಗೆ ರಾಜ್ಯಾದ್ಯಂತ ‘ಹರ್ ಘರ್ ತಿರಂಗಾ’ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ದೇಶಪ್ರೇಮಿಗಳಿಗೆ ಕರೆ ನೀಡಿದರು.
ಇದೇ ವೇಳೆ ಮಾತನಾಡಿದ ಮಾಜಿ ಶಾಸಕ ಸಂಜಯ್ ಪಾಟೀಲ್, ಕೆಪಿಎಸ್‌ಸಿ, ಪಶು ಸಂಗೋಪನೆ ಹಾಗೂ ತೋಟಗಾರಿಕಾ ಇಲಾಖೆಯ ನೇಮಕಾತಿಗಳಲ್ಲೂ ಸರ್ಕಾರ ದೊಡ್ಡ ಮಟ್ಟದ ಗೊಂದಲಗಳನ್ನು ಸೃಷ್ಟಿಸಿದೆ ಎಂದು ದೂರಿದರು. ನೀಟ್ ಪರೀಕ್ಷೆಯ ಹೋರಾಟದ ಕುರಿತು ಪ್ರಸ್ತಾಪಿಸಿದ ಅವರು, ವಿದೇಶದಲ್ಲಿರುವ ಅಭಿಜೀತ್ ದೀಪಕೆ ಎಂಬ ವ್ಯಕ್ತಿಯ ಮೂಲಕ ಭಾರತದ ಪ್ರಧಾನಿಯವರ ಖ್ಯಾತಿಯನ್ನು ಕೆಡಿಸಲು ಅಂತರಾಷ್ಟ್ರೀಯ ಮಟ್ಟದ ಷಡ್ಯಂತ್ರ ನಡೆಯುತ್ತಿದೆ. ವಿರೋಧ ಪಕ್ಷಗಳು ಇಂತಹ ದೇಶವಿರೋಧಿ ಕೃತ್ಯಗಳಿಗೆ ಬೆಂಬಲ ನೀಡಬಾರದು ಎಂದು ಮನವಿ ಮಾಡಿದರು.
ಈ ವೇಳೆ ಬಿಜೆಪಿ ನಗರಾಧ್ಯಕ್ಷೆ ಗೀತಾ ಸುತಾರ್, ಗ್ರಾಮೀಣಾಧ್ಯಕ್ಷ ಸುಭಾಷ್ ಪಾಟೀಲ್, ಮಾಜಿ ಶಾಸಕ ಅರವಿಂದ ಪಾಟೀಲ್ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.

Tags:

error: Content is protected !!