Belagavi

ಬೆಳಗಾವಿ: ದಿವಂಗತ ನಿಶಾ ಛಾಬ್ರಿಯಾ ಸವಿನೆನಪು; 1,300 ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್, ಶೈಕ್ಷಣಿಕ ನೆರವು!

Share

ಬೆಳಗಾವಿಯ ದಿವಂಗತ ನಿಶಾ ಛಾಬ್ರಿಯಾ ಅವರ ಜನ್ಮದಿನದ ನೆನಪಿಗಾಗಿ ಉಚಿತ ಪುಸ್ತಕ ಹಾಗೂ ಶಾಲಾ ಶುಲ್ಕ ವಿತರಣಾ ಕಾರ್ಯಕ್ರಮ ನಡೆಯಿತು. ವಿವಿಧ ಸಾಮಾಜಿಕ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮದಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ನೆರವು ಪಡೆದುಕೊಂಡರು.
ಬೆಳಗಾವಿಯ ‘ರಿದ್ಧಿ ವಿಜ್ಹನ್’ ಸಂಸ್ಥಾಪಕಿ ಹಾಗೂ ‘ಮೆಟ್ರೋ ಕಾಸ್ಟ್ ಪ್ರೈವೇಟ್ ಇಂಡಿಯಾ ಲಿಮಿಟೆಡ್’ನ ಸಂಚಾಲಕರಾಗಿದ್ದ ದಿವಂಗತ ನಿಶಾ ಛಾಬ್ರಿಯಾ ಅವರ ಜನ್ಮದಿನದ ಅಂಗವಾಗಿ ನಗರದ ಅನಗೋಳದಲ್ಲಿರುವ ‘ಸೆಂಟ್ ಮೀರಾ ಇಂಗ್ಲಿಷ್ ಮೀಡಿಯಂ ಶಾಲೆ’ಯಲ್ಲಿ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ‘ಬೆಳಗಾಂವ್ ಚಾಲೆಂಜರ್ಸ್ ಟ್ಯಾಂಜೆಂಟ್-38’, ‘ರೌಂಡ್ ಟೇಬಲ್’ ಹಾಗೂ ‘ಲೇಡೀಸ್ ಸರ್ಕಲ್ 208’ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಈ ವಿಶೇಷ ಸೇವಾನಿಷ್ಠ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ರಾಷ್ಟ್ರೀಯ ಯೋಜನಾ ಸಂಚಾಲಕಿ ಹಾಗೂ ಕಾರ್ಯದರ್ಶಿ ಸಂಗೀತಾ ಚಾಂಡಕ್ ಅವರು ನಮ್ಮ ಸಂಸ್ಥೆಯು ‘ಶಿಕ್ಷಣದ ಮೂಲಕ ಸ್ವಾತಂತ್ರ್ಯ’ (Freedom Through Education) ಎಂಬ ಪ್ರಮುಖ ಧ್ಯೇಯದೊಂದಿಗೆ ಕಾರ್ಯಾಚರಿಸುತ್ತಿದೆ. ಸಣ್ಣ ಹಳ್ಳಿಗಳಲ್ಲಿ ಶಾಲಾ ಕೊಠಡಿಗಳು ಹಾಗೂ ಸ್ಮಾರ್ಟ್ ಕ್ಲಾಸ್‌ರೂಮ್‌ಗಳನ್ನು ನಿರ್ಮಿಸುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕ, ಲೇಖನ ಸಾಮಗ್ರಿ ಮತ್ತು ಬ್ಯಾಗ್‌ಗಳನ್ನು ವಿತರಿಸುತ್ತಿದ್ದೇವೆ. ಇಂದು ನಮ್ಮ ಅಗಲಿದ ಮಾಜಿ ಸದಸ್ಯೆ ನಿಶಾ ಛಾಬ್ರಿಯಾ ಅವರ ಸವಿನೆನಪಿನಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ನೀಡಿದ್ದೇವೆ. ಈ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಿದ ಶಾಲೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದಕ್ಕೆ ನಮ್ಮ ಧನ್ಯವಾದಗಳನ್ನು ತಿಳಿಸಿದರು.

ಇನ್ನು ಪೂನಮ್ ಗುಲಬಾನಿ ಅವರು ಶಿಕ್ಷಣದ ಮೂಲಕ ಸ್ವಾತಂತ್ರ್ಯ’ ಹಾಗೂ ‘ಸ್ನೇಹ ಮತ್ತು ಸಮುದಾಯ ಸೇವೆ’ ಎಂಬ ಆಶಯದೊಂದಿಗೆ ನಮ್ಮ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಅಗಲಿದ ನಮ್ಮ ಪ್ರೀತಿಯ ಗೆಳತಿ ನಿಶಾ ಛಾಬ್ರಿಯಾ ಅವರ ಹುಟ್ಟುಹಬ್ಬದ ನೆನಪಿಗಾಗಿ, ಅವರ ಪತಿ ನಾಗೇಶ್ ಛಾಬ್ರಿಯಾ ಹಾಗೂ ಕುಟುಂಬಸ್ಥರ ಉದಾರ ಪ್ರಾಯೋಜಕತ್ವದಲ್ಲಿ ಈ ಶಾಲೆಯ 1,300 ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್‌ಗಳನ್ನು ಹಾಗೂ 5 ಬಡ ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕವನ್ನು ನೀಡಲಾಗಿದೆ ಎಂದರು.

ಈ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷೆ ಪೂನಮ್ ಗುಲಾಬಾನಿ, ರಾಷ್ಟ್ರೀಯ ಯೋಜನಾ ಸಂಚಾಲಕಿ ಹಾಗೂ ಕಾರ್ಯದರ್ಶಿ ಸಂಗೀತಾ ಚಾಂಡಕ್, ಟ್ಯಾಂಜೆಂಟ್ 38ರ ಖಜಾಂಚಿ ತ್ರಿವೇಣಿ ಬಾಗಿ, ಲೇಡೀಸ್ ಸರ್ಕಲ್ 208ರ ಅಧ್ಯಕ್ಷರು ಹಾಗೂ ಸದಸ್ಯೆ ಮೀನಲ್ ರಾಯ್‌ಬಾಗಿ, ಶಾಲೆಯ ಆಡಳಿತಾಧಿಕಾರಿ ರಾಘವೇಂದ್ರ ಕುಲಕರ್ಣಿ, ಉಪ ಪ್ರಾಚಾರ್ಯರಾದ ಋತುಜಾ ಜಾಧವ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

Tags:

error: Content is protected !!