ಸೊಲ್ಲಾಪುರ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಇಳಕಲ್ ಬಳಿ ಲಾರಿ ಚಾಲಕನಿಗೆ ಚಾಲನೆ ಮಾಡುತ್ತಿದ್ದಂತೆಯೇ ದಿಢೀರ್ ಹೃದಯಾಘಾತ ಸಂಭವಿಸಿದೆ. ತೀವ್ರ ಎದೆನೋವಿನ ನಡುವೆಯೂ ಚಾಲಕ ಮೆರೆದ ಸಮಯಪ್ರಜ್ಞೆಯಿಂದ ಭಾರಿ ಅನಾಹುತವೊಂದು ತಪ್ಪಿದ್ದು, ವಾಹನವನ್ನು ರಸ್ತೆ ಪಕ್ಕಕ್ಕೆ ನಿಲ್ಲಿಸಿ ಚಾಲಕ ಕೊನೆಯುಸಿರೆಳೆದಿದ್ದಾರೆ.


ಬಾಗಲಕೋಟೆ ಜಿಲ್ಲೆಯ ಇಳಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಸೊಲ್ಲಾಪುರ-ಮಂಗಳೂರು ಹೆದ್ದಾರಿಯಲ್ಲಿ ಈ ದುರಂತ ಸಂಭವಿಸಿದೆ. ಮೃತ ಚಾಲಕನನ್ನು ಜಮ್ಮು-ಕಾಶ್ಮೀರದ ಕಥುವಾ ಜಿಲ್ಲೆಯ ಬಸೋಳಿ ನಿವಾಸಿ ಇನ್ಸಾರ್ ಅಹ್ಮದ್ (60) ಎಂದು ಗುರುತಿಸಲಾಗಿದೆ. ಲಾರಿ ಚಾಲನೆ ಮಾಡುತ್ತಿದ್ದಾಗ ಇನ್ಸಾರ್ ಅಹ್ಮದ್ ಅವರಿಗೆ ತೀವ್ರ ಹೃದಯಾಘಾತವಾಗಿದ್ದು, ಆ ಸಮಯದಲ್ಲೂ ಅವರು ಧೈರ್ಯ ಹಾಗೂ ಸಮಯಪ್ರಜ್ಞೆ ತೋರಿ ಲಾರಿಯನ್ನು ಸುರಕ್ಷಿತವಾಗಿ ರಸ್ತೆ ಪಕ್ಕಕ್ಕೆ ನಿಲ್ಲಿಸಿದ್ದಾರೆ. ಇದರಿಂದಾಗಿ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಇತರೆ ವಾಹನಗಳಿಗೆ ಸಂಭವಿಸಬಹುದಾಗಿದ್ದ ದೊಡ್ಡ ಮಟ್ಟದ ಅಪಘಾತ ತಪ್ಪಿದಂತಾಗಿದೆ. ಘಟನೆಗೆ ಸಂಬಂಧಿಸಿದಂತೆ ಇಳಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
