ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಿಡಗಲ್ ಗ್ರಾಮದ ಐತಿಹಾಸಿಕ ಶ್ರೀ ಸಿದ್ಧೇಶ್ವರ ದೇವಸ್ಥಾನದಲ್ಲಿ ಅಪರಿಚಿತ ಕಿಡಿಗೇಡಿಗಳು ಶಿವಲಿಂಗ, ನಂದಿ ಸೇರಿದಂತೆ ವಿವಿಧ ಧಾರ್ಮಿಕ ಸಂಕೇತಗಳನ್ನು ಧ್ವಂಸಗೊಳಿಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಹೀನ ಕೃತ್ಯವನ್ನು ಖಂಡಿಸಿರುವ ಗ್ರಾಮಸ್ಥರು, ಶಿವಭಕ್ತರು ಹಾಗೂ ಹಿಂದೂಪರ ಸಂಘಟನೆಗಳು ತಕ್ಷಣ ತಪ್ಪಿತಸ್ಥರನ್ನು ಬಂಧಿಸುವಂತೆ ಆಗ್ರಹಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.


ಖಾನಾಪುರ ತಾಲೂಕಿನ ‘ಸಿದ್ಧಗುಂಡ’ ಎಂದೇ ಪ್ರಸಿದ್ಧವಾಗಿರುವ ನಿಡಗಲ್ ಗ್ರಾಮದ ಹೊರವಲಯದ ಬೆಟ್ಟದ ಮೇಲಿರುವ ಬೃಹತ್ ಶಿಲೆಗಳ ಈ ಪ್ರಾಚೀನ ಮಹಾದೇವ ದೇವಸ್ಥಾನದಲ್ಲಿ ಅಪರಿಚಿತ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಗರ್ಭಗುಡಿಯಲ್ಲಿದ್ದ ಶಿವಲಿಂಗ, ನಂದಿ, ಆಮೆ ವಿಗ್ರಹ ಹಾಗೂ ಮುಂಭಾಗದ ತುಳಸಿ ವೃಂದಾವನವನ್ನು ಹಾನಿಗೊಳಿಸಲಾಗಿದೆ. ಪವಿತ್ರ ಶ್ರಾವಣ ಮಾಸದ ಧಾರ್ಮಿಕ ಉತ್ಸವಗಳ ಸಿದ್ಧತೆ ನಡೆಯುತ್ತಿರುವ ಬೆನ್ನಲ್ಲೇ ಈ ಘಟನೆ ಸಂಭವಿಸಿದ್ದು, ಸ್ಥಳೀಯರ ಹಾಗೂ ಭಕ್ತರ ಭಾವನೆಗಳಿಗೆ ತೀವ್ರ ಧಕ್ಕೆಯುಂಟಾಗಿದೆ. ಧಾರ್ಮಿಕ ವೈಷಮ್ಯ ಸೃಷ್ಟಿಸುವ ಉದ್ದೇಶದಿಂದಲೇ ಈ ಕೃತ್ಯ ಎಸಗಲಾಗಿದೆಯೇ ಎಂಬ ಶಂಕೆ ವ್ಯಕ್ತವಾಗಿದ್ದು, ಘಟನೆಯಿಂದಾಗಿ ಇಡೀ ತಾಲೂಕಿನಲ್ಲಿ ಉದ್ವಿಗ್ನತೆ ಹಾಗೂ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಘಟನೆ ಬೆಳಕಿಗೆ ಬಂದ ತಕ್ಷಣವೇ ಗ್ರಾಮಸ್ಥರು ಖಾನಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಖಾನಾಪುರ ಪೊಲೀಸ್ ಠಾಣೆಯ ಪಿಐ ಎಲ್. ಎಚ್. ಗೌಂಡಿ, ಸಿಬ್ಬಂದಿ ಸಿದ್ರಾಮ ಹಸಾರೆ ಹಾಗೂ ತಂಡದೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುಪ್ರಸಿದ್ಧ ಪ್ರವಾಸಿ ಹಾಗೂ ಧಾರ್ಮಿಕ ತಾಣವಾಗಿರುವ ಈ ಕ್ಷೇತ್ರದಲ್ಲಿ ಭದ್ರತೆಯ ಲೋಪ ಕಂಡುಬಂದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೃತ್ಯ ಎಸಗಿದ ಕಿಡಿಗೇಡಿಗಳ ಪತ್ತೆಗೆ ಜಾಲ ಬೀಸಿದ್ದಾರೆ. ತಪ್ಪಿತಸ್ಥರನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಸ್ಥಳೀಯರು ಹಾಗೂ ವಿವಿಧ ಸಂಘಟನೆಗಳು ಕಟ್ಟುನಿಟ್ಟಾಗಿ ಆಗ್ರಹಿಸಿವೆ.
