ಬಾಗಲಕೋಟೆ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ಸ್ನೇಹಿತರೊಂದಿಗೆ ಕಾರಿನಲ್ಲಿ ತೆರಳುತ್ತಿದ್ದ ಯುವಕನೊಬ್ಬ ಅಪಘಾತದ ರಭಸಕ್ಕೆ ತನ್ನ ಕೈಯನ್ನೇ ಕಳೆದುಕೊಂಡಿರುವ ದಾರುಣ ಘಟನೆ ಸಾವಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬಾಗಲಕೋಟೆ ಜಿಲ್ಲೆಯ ರಬಕವಿಯಿಂದ ಸಾವಳಗಿ ಗ್ರಾಮಕ್ಕೆ ಮೂವರು ಸ್ನೇಹಿತರು ಕಾರಿನಲ್ಲಿ ತೆರಳುತ್ತಿದ್ದಾಗ, ಕಡಕೋಳ ರಸ್ತೆಯಲ್ಲಿ ನಿಯಂತ್ರಣ ತಪ್ಪಿದ ಕಾರು ಭೀಕರವಾಗಿ ಪಲ್ಟಿಯಾಗಿದೆ. ಈ ಅಪಘಾತದಲ್ಲಿ ಕಾರಿನಲ್ಲಿದ್ದ 16 ವರ್ಷದ ರೋಹನ್ ವಾಮೋಡೇ ಎಂಬ ಯುವಕನ ಕೈ ಕಟ್ ಆಗಿದ್ದು, ತೀವ್ರ ರಕ್ತಸ್ರಾವವಾಗಿದೆ. ಕಾರಿನಲ್ಲಿದ್ದ ಉಳಿದಿಬ್ಬರು ಯುವಕರಾದ ಸಂತೋಷ್ ಪಕ್ಕೀರಪುರ (16) ಮತ್ತು ಪ್ರಜ್ವಲ್ ತಳವಾರ (18) ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸದ್ಯ ಮೂವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಭೀಕರ ಘಟನೆ ಸಂಬಂಧ ಸಾವಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.
