ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಇಳಕಲ್ ನಗರಕ್ಕೆ ಆಗಮಿಸಿದ ವಿಜಯಾನಂದ ಕಾಶಪ್ಪನವರ್ ಅವರಿಗೆ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದ್ದಾರೆ. ನಗರಕ್ಕೆ ಆಗಮಿಸಿದ ಸಚಿವರು ದೇವಸ್ಥಾನ ಹಾಗೂ ದರ್ಗಾಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.


ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರಕ್ಕೆ ನೂತನ ಸಚಿವ ವಿ.ಎಸ್. ಕಾಶಪ್ಪನವರ್ ಮೊದಲ ಬಾರಿಗೆ ಆಗಮಿಸುತ್ತಿದ್ದಂತೆ ಕಾರ್ಯಕರ್ತರ ಉತ್ಸಾಹ ಮುಗಿಲು ಮುಟ್ಟಿತ್ತು. ನಗರದ ಪ್ರಸಿದ್ಧ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಸಚಿವರು, ನಂತರ ಹಜರತ್ ಮುರ್ತುಜಾ ಷಾ ಖಾದ್ರಿ ದರ್ಗಾಕ್ಕೆ ತೆರಳಿ ವಿಶೇಷ ಪ್ರಾರ್ಥನೆ ನೆರವೇರಿಸಿದರು. ದರ್ಗಾದ ಆವರಣದಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ, ಸಚಿವರ ಪರ ಜಯಘೋಷ ಕೂಗುತ್ತಾ ಅದ್ದೂರಿಯಾಗಿ ಬರಮಾಡಿಕೊಂಡರು. ನೂತನ ಸಚಿವರನ್ನು ಕಣ್ಣುತುಂಬಿಕೊಳ್ಳಲು ಹಾಗೂ ಶುಭಾಶಯ ಕೋರಲು ಅಪಾರ ಸಂಖ್ಯೆಯ ಸಾರ್ವಜನಿಕರು ಮತ್ತು ಬೆಂಬಲಿಗರು ಸ್ಥಳದಲ್ಲಿ ಜಮಾಯಿಸಿದ್ದರು.
