Khanapur

ಕಳಪೆ ರಸ್ತೆ ಕಾಮಗಾರಿ: ತನಿಖೆಗೆ ಆಗ್ರಹಿಸಿ ಹಲಸಿವಾಡಿ ಗ್ರಾಮಸ್ಥರಿಂದ ಆಕ್ರೋಶ!

Share

ಕೋಟಿ ರೂಪಾಯಿ ವೆಚ್ಚದಲ್ಲಿ ಇತ್ತೀಚೆಗಷ್ಟೇ ಡಾಂಬರೀಕರಣಗೊಂಡಿದ್ದ ಹಲಸಿ – ಹಲಸಿವಾಡಿ ರಸ್ತೆ ಕೇವಲ ಮೂರೇ ತಿಂಗಳಲ್ಲಿ ಸಂಪೂರ್ಣ ಹದಗೆಟ್ಟಿದೆ. ಕಳಪೆ ಕಾಮಗಾರಿಯಿಂದಾಗಿ ರಸ್ತೆಯ ಜಲ್ಲಿಕಲ್ಲುಗಳು ಎದ್ದುಬರುತ್ತಿದ್ದು, ವಾಹನ ಸವಾರರು ಜೀವದ ಹಂಗು ತೊರೆದು ಸಂಚರಿಸುತ್ತಿದ್ದಾರೆ. ತಕ್ಷಣವೇ ತನಿಖೆ ನಡೆಸಿ ರಸ್ತೆ ದುರಸ್ತಿ ಮಾಡದಿದ್ದರೆ ಉಗ್ರ ರಸ್ತೆ ತಡೆ ಹೋರಾಟ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಖಾನಾಪುರ ತಾಲೂಕಿನ ಪ್ರಮುಖ ಸಂಪರ್ಕ ರಸ್ತೆಯಾದ ಹಲಸಿಯಿಂದ ಹಲಸಿವಾಡಿವರೆಗಿನ ಮಾರ್ಗಕ್ಕೆ ಶಾಸಕ ವಿಠ್ಠಲ ಹಲಗೇಕರ ಅವರ ನೇತೃತ್ವದಲ್ಲಿ ಸುಮಾರು ಒಂದು ಕೋಟಿ ರೂಪಾಯಿ ಅನುದಾನದಲ್ಲಿ ಡಾಂಬರೀಕರಣ ಮಾಡಲಾಗಿತ್ತು. ಆದರೆ, ವರ್ಷದ ಆರಂಭಿಕ ಮಳೆಗೇ ಶಿವಾಜಿ ಹೈಸ್ಕೂಲ್‌ನಿಂದ ಹಲಸಿವಾಡಿವರೆಗಿನ ರಸ್ತೆ ಸಂಪೂರ್ಣ ಕಿತ್ತುಹೋಗಿದ್ದು, ಭ್ರಷ್ಟಾಚಾರದ ವಾಸನೆ ಬಡಿಯುತ್ತಿದೆ. ರಸ್ತೆಯ ಜಲ್ಲಿಕಲ್ಲುಗಳು ಮಳೆಗೆ ಕೊಚ್ಚಿಹೋಗಿ ರಸ್ತೆಯುದ್ದಕ್ಕೂ ಹರಡಿಕೊಂಡಿರುವುದರಿಂದ ಶಾಲಾ ವಿದ್ಯಾರ್ಥಿಗಳು, ಸೈಕಲ್ ಹಾಗೂ ದ್ವಿಚಕ್ರ ವಾಹನ ಸವಾರರು ಜಾರಿ ಬಿದ್ದು ಗಾಯಗೊಳ್ಳುತ್ತಿದ್ದಾರೆ. ಸಾರ್ವಜನಿಕರ ತೆರಿಗೆ ಹಣ ನೀರ ಪಾಲಾಗಿರುವುದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಸ್ತೆ ಕಾಮಗಾರಿಯ ಗುಣಮಟ್ಟ ತೀರಾ ಕಳಪೆಯಾಗಿದ್ದು, ಮುಂದಿನ ಮಳೆಗಾಲದ ವೇಳೆಗೆ ಈ ರಸ್ತೆ ಸಂಪೂರ್ಣ ನಾಶವಾಗುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆ (PWD) ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು ಮತ್ತು ಗುತ್ತಿಗೆದಾರರಿಂದಲೇ ರಸ್ತೆಯನ್ನು ಮರು ದುರಸ್ತಿ ಮಾಡಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ. ಕಾಮಗಾರಿಯ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿ ಹಾಗೂ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ರಸ್ತೆ ತಡೆ ಚಳವಳಿ ನಡೆಸಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಹಲಸಿವಾಡಿ ಗ್ರಾಮಸ್ಥರು ಆಡಳಿತಕ್ಕೆ ಗಡುವು ನೀಡಿದ್ದಾರೆ.

Tags:

error: Content is protected !!