ಖಾನಾಪುರ-ಜಾಂಬೋಟಿ ರಸ್ತೆಯ ಶನಯಾ ಗಾರ್ಡನ್ ಬಳಿ ರಸ್ತೆ ಗುಂಡಿ ತಪ್ಪಿಸಲು ಹೋಗಿ ಆಟೋ ರಿಕ್ಷಾ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ನುಗ್ಗಿದ ಪರಿಣಾಮ ಆರು ಮಹಿಳೆಯರು ಸೇರಿದಂತೆ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತ ನಡೆದ ತಕ್ಷಣವೇ ಆ ಮಾರ್ಗವಾಗಿ ಸಾಗುತ್ತಿದ್ದ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಪಂಡಿತ್ ಓಗಲೆ ಹಾಗೂ ಕಾರ್ಯಕರ್ತರು ತಮ್ಮ ಸ್ವಂತ ಕಾರುಗಳಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ ಸಮಯಪ್ರಜ್ಞೆ ಮೆರೆದಿದ್ದಾರೆ.

ಖಾನಾಪುರ ನಗರದ ನಾಯಕ್ ಗಲ್ಲಿಯ ನಿವಾಸಿಗಳು ಅಂಬೋಳಿ ಗ್ರಾಮಕ್ಕೆ ಸಂಬಂಧಿಕರ ಅಂತ್ಯಕ್ರಿಯೆಗೆ ರಿಕ್ಷಾದಲ್ಲಿ ತೆರಳುತ್ತಿದ್ದಾಗ ರಸ್ತೆ ಗುಂಡಿ ಹಾಗೂ ಹರಡಿದ್ದ ಜಲ್ಲಿಕಲ್ಲುಗಳಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಯಲ್ಲವ್ವ ನಾಯಕ್, ಕೆಂಚವ್ವ ನಾಯಕ್, ಬಸವ್ವ ನಾಯಕ್, ಮಹಾದೇವಿ ದೇಸೂರಕರ, ದುರ್ಗವ್ವ ದೇಸೂರಕರ, ಶಾಂತಾ ದೇಸೂರಕರ ಹಾಗೂ ರುದ್ರಪ್ಪ ನಾಯಕ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದೇ ವೇಳೆ ಜಾಂಬೋಟಿ ಕಡೆಗೆ ತೆರಳುತ್ತಿದ್ದ ಬಿಜೆಪಿ ಯುವ ಮುಖಂಡ ಪಂಡಿತ್ ಓಗಲೆ ಹಾಗೂ ಅನಂತ ಸಾವಂತ್ ತಮ್ಮ ಬೊಲೆರೊ ಮತ್ತು ವ್ಯಾಗನ್ಆರ್ ವಾಹನಗಳಲ್ಲಿ ಗಾಯಾಳುಗಳನ್ನು ತಕ್ಷಣ ಖಾನಾಪುರ ಆಸ್ಪತ್ರೆಗೆ ದಾಖಲಿಸಿದರು. ತಲೆಗೆ ತೀವ್ರ ಗಾಯವಾಗಿದ್ದ ಬಸವ್ವ, ಕೆಂಚವ್ವ ಹಾಗೂ ದುರ್ಗವ್ವ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿ ಆಸ್ಪತ್ರೆಗೆ ರವಾನಿಸಲಾಗಿದೆ. ರಕ್ಷಣಾ ಕಾರ್ಯದಲ್ಲಿ ಸನ್ನಿ ಮಯೇಕರ್, ಬಂಟಿ ಬುವಾಜಿ, ಜ್ಯೋತಿಬಾ ಚೌಗುಲೆ ಹಾಗೂ ನಿಲೇಶ್ ಕುಂಭಾರ ಸಾಥ್ ನೀಡಿದ್ದು, ಖಾನಾಪುರ-ಜಾಂಬೋಟಿ ರಸ್ತೆ ಗುಂಡಿಗಳ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
