ಖಾನಾಪುರ ತಾಲೂಕು ಪಂಚಾಯಿತಿಯ ಸಭಾಂಗಣದಲ್ಲಿ ನಿವೃತ್ತಿ ಹೊಂದಿದ ಸಹಾಯಕ ನಿರ್ದೇಶಕಿ ರೂಪಾಲಿ ಬಡಕುಂದ್ರಿ ಹಾಗೂ ವಿವಿಧ ಗ್ರಾಮ ಪಂಚಾಯಿತಿಗಳ ಪಿಡಿಒಗಳ ಬೀಳ್ಕೊಡುಗೆ ಮತ್ತು ನೂತನ ಸಹಾಯಕ ನಿರ್ದೇಶಕರ ಸ್ವಾಗತ ಸಮಾರಂಭವು ಅತ್ಯಂತ ಸೌಹಾರ್ದಯುತವಾಗಿ ನೆರವೇರಿತು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್ ಮೇತ್ರಿ ಅವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ಜರುಗಿತು.


ಖಾನಾಪುರ ತಾಲೂಕಿನಲ್ಲಿ ಜವಾಬ್ದಾರಿಯುತ ಅಧಿಕಾರಿಯಾಗಿ ಸೇವೆ ಸಲ್ಲಿಸಿ ‘ಲೇಡಿ ಸಿಂಗಂ’ ಎಂದೇ ಗುರುತಿಸಿಕೊಂಡಿದ್ದ ಸಹಾಯಕ ನಿರ್ದೇಶಕಿ ರೂಪಾಲಿ ಬಡಕುಂದ್ರಿ ಹಾಗೂ ನಿವೃತ್ತಿ ಹೊಂದಿದ ಪಿಡಿಒಗಳಾದ ಯಶವಂತ್ ಘಾಡಿ (ಹೆಬ್ಬಾಳ್), ನಾರಾಯಣ್ ಪಾಟೀಲ್ (ಜಾಂಬೋಟಿ), ಪುಂಡಲೀಕ್ ಹೆಬ್ಬಾಳ್ಕರ್ (ಬೈಲೂರು), ವಿಠ್ಠಲ್ ದೇವಲಟ್ಟಿ (ಕಕ್ಕೇರಿ) ಅವರಿಗೆ ಶಾಲು ಹೊದಿಸಿ, ಪುಷ್ಪಹಾರ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಇದೇ ವೇಳೆ ನೂತನ ಸಹಾಯಕ ನಿರ್ದೇಶಕ ಶಶಿಧರ್ ಬೆಲ್ಲಾರಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ಸನ್ಮಾನಕ್ಕೆ ಉತ್ತರಿಸಿ ಮಾತನಾಡಿದ ರೂಪಾಲಿ ಬಡಕುಂದ್ರಿ ಅವರು, ಸಹೋದ್ಯೋಗಿಗಳ ಸಹಕಾರದಿಂದಾಗಿ ಕರ್ತವ್ಯ ನಿರ್ವಹಣೆ ಸುಲಭವಾಯಿತು ಹಾಗೂ ಖಾನಾಪುರದ ಸೇವಾ ಅನುಭವ ಎಂದಿಗೂ ಸ್ಮರಣೀಯ ಎಂದರು. ಕಾರ್ಯಕ್ರಮದಲ್ಲಿ ತಾಪಂ ಇಒ ರಮೇಶ್ ಮೇತ್ರಿ ಅವರು ನಿವೃತ್ತ ಅಧಿಕಾರಿಗಳ ಸೇವೆ ಹಾಗೂ ಪ್ರಾಮಾಣಿಕತೆಯನ್ನು ಶ್ಲಾಘಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಪಿಡಿಒ ಅನಂತ್ ಭಿಂಗೆ ಸೇರಿದಂತೆ ತಾಲೂಕಿನ ಪ್ರಮುಖ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
