Belagavi

ನ್ಯಾಯಾಲಯದ ಆದೇಶದ ನೆಪದಲ್ಲಿ ತಡರಾತ್ರಿ ಖಾಕಿ ದೌರ್ಜನ್ಯ

Share

ಬೆಳಗಾವಿಯಲ್ಲಿ ತಡರಾತ್ರಿ ಮಾನವೀಯತೆ ಮರೆತು ನಡೆದ ಪೊಲೀಸ್ ಕಾರ್ಯಾಚರಣೆಯೊಂದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ನ್ಯಾಯಾಲಯದ ಗಡುವಿಗೂ ಮುನ್ನವೇ 4 ವರ್ಷದ ಹೆಣ್ಣು ಮಗುವನ್ನು ಮಧ್ಯರಾತ್ರಿ ಖಾಸಗಿ ವಾಹನದಲ್ಲಿ ಕರೆದೊಯ್ದ ವಿಜಯಪುರ ಪೊಲೀಸರ ಕ್ರಮದ ವಿರುದ್ಧ ತಂದೆ ಸಾಮಾಜಿಕ ಜಾಲತಾಣದಲ್ಲಿ ಕಣ್ಣೀರಿಟ್ಟಿದ್ದಾರೆ. ಈ ಘಟನೆ ಸದ್ಯ ಜಿಲ್ಲಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಬೆಳಗಾವಿಯಲ್ಲಿ ನ್ಯಾಯಾಲಯದ ಆದೇಶದ ನೆಪದಲ್ಲಿ 4.6 ವರ್ಷದ ಹೆಣ್ಣು ಮಗುವನ್ನು ತಡರಾತ್ರಿ ಬಲವಂತವಾಗಿ ಕರೆದೊಯ್ದ ಘಟನೆ ಬೆಳಕಿಗೆ ಬಂದಿದ್ದು, ಪೊಲೀಸರ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಖಂಡನೆ ವ್ಯಕ್ತವಾಗಿದೆ. ವಿಜಯಪುರದ ಆದರ್ಶ ನಗರ ಪೊಲೀಸ್ ಠಾಣೆಯ ಎಎಸ್ಐ ಸೀತಾರಾಮ್ ಲಮಾನಿ ಮತ್ತು ತಂಡವು ಜುಲೈ 17ರ ಸಂಜೆ 5 ಗಂಟೆಯೊಳಗೆ ಮಗುವನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕೆಂಬ ಆದೇಶವನ್ನು ಮುಂದಿಟ್ಟುಕೊಂಡು, ಜುಲೈ 16ರ ಮಧ್ಯರಾತ್ರಿ 12:30ಕ್ಕೆ ಕಾರ್ಯಾಚರಣೆ ನಡೆಸಿದ್ದಾರೆ. ಯಾವುದೇ ಪೂರ್ವ ಸೂಚನೆ ನೀಡದೆ, 4 ವರ್ಷದ ಕಂದಮ್ಮನನ್ನು ಅಪರಾಧಿಯಂತೆ ನಡೆಸಿಕೊಳ್ಳಲಾಗಿದ್ದು, ತಂದೆ ಹಾಗೂ ಕುಟುಂಬಸ್ಥರಿಗೆ ಮಗುವನ್ನು ಮುಟ್ಟಲು ಮತ್ತು ಮಾತನಾಡಿಸಲು ಬಿಡದೆ ದರ್ಪ ತೋರಿದ್ದಾರೆ ಎಂದು ಮಗುವಿನ ತಂದೆ ಆದಿತ್ಯ ಪೊರಚಗಾವ್ ಗಂಭೀರ ಆರೋಪ ಮಾಡಿದ್ದಾರೆ.

ಕಳೆದ ಎರಡು ವರ್ಷಗಳಿಂದ ಪ್ರೀತಿಯಿಂದ ಸಾಕಿದ ಮಗಳು ಈ ದಿಢೀರ್ ಬೆಳವಣಿಗೆಯಿಂದ ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿದ್ದಾಳೆ ಎಂದು ತಂದೆ ಆದಿತ್ಯ ಕಣ್ಣೀರು ಹಾಕಿದ್ದಾರೆ. ಅಲ್ಲದೆ, ಮಗುವನ್ನು ಕರೆದೊಯ್ಯಲು ಬಳಸಿದ ಖಾಸಗಿ ವಾಹನದ ಚಾಲಕ ಶರ್ಟ್ ಧರಿಸದೆ ಬೇಜವಾಬ್ದಾರಿಯಿಂದ ವಾಹನ ಚಲಾಯಿಸುತ್ತಿದ್ದ ಹಾಗೂ ಕಾರಿನಲ್ಲಿ ನಾಲ್ವರು ಪೊಲೀಸರು ಇದ್ದರೆಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿದ ವಿಡಿಯೋದಲ್ಲಿ ದೂರಿದ್ದಾರೆ.

ಇಷ್ಟು ಸಣ್ಣ ಮಗುವನ್ನು ತಡರಾತ್ರಿಯಲ್ಲಿ ಕರೆದೊಯ್ಯಲು ಯಾರ ಆದೇಶವಿತ್ತು ಎಂದು ಪ್ರಶ್ನಿಸಿರುವ ಅವರು, ತಮಗೆ ಆದ ಅನ್ಯಾಯದ ವಿರುದ್ಧ ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಸದ್ಯ ಪ್ರಕರಣ ನ್ಯಾಯಾಲಯದಲ್ಲಿದ್ದು, ಮಗು ತಾಯಿಯ ವಶದಲ್ಲಿದೆ.

Tags:

error: Content is protected !!