Vijaypura

ಕನೇರಿ ಸ್ವಾಮೀಜಿಗಳ ಹೆಸರಿನಲ್ಲಿ ಕೋಮುವಾದ ಪ್ರಚೋದನೆ ಆರೋಪ: ಕಾರ್ಯಕ್ರಮ ಬಹಿಷ್ಕಾರ ಎಚ್ಚರಿಕೆ

Share

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಕನೇರಿ ಕಾಡಸಿದ್ದೇಶ್ವರ ಸ್ವಾಮೀಜಿಯವರನ್ನು ಮುಂದೆ ಮಾಡಿ ರಾಜ್ಯದಲ್ಲಿ ಕೋಮುವಾದ ಪ್ರಚೋದಿಸಿ ಸಮಾಜವನ್ನು ವಿಭಜಿಸುವ ಹುನ್ನಾರ ನಡೆಸಿವೆ ಎಂದು ವಿಜಯಪುರ ಜಿಲ್ಲಾ ಬಸವಾದಿ ಶರಣರು ಹಾಗೂ ಪ್ರಗತಿಪರ ಸಂಘದ ಪ್ರಮುಖ ಚಂದ್ರಶೇಖರ ಕೊಡಬಾಗಿ ಆರೋಪಿಸಿದರು. ವಿಜಯಪುರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕನೇರಿ ಸ್ವಾಮೀಜಿ ಸಮಾಜದಲ್ಲಿ ವಿಷಬೀಜ ಬಿತ್ತುವುದನ್ನು ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ವಿಜಯಪುರ ಜಿಲ್ಲೆಯಲ್ಲಿ ಅವರು ಭಾಗವಹಿಸುವ ಸಭೆ- ಸಮಾರಂಭಗಳನ್ನು ಬಹಿಷ್ಕರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ರಾಮಜನ್ಮಭೂಮಿ ಟ್ರಸ್ಟ್‌ ಅನ್ನು ಆರ್‌ಎಸ್‌ಎಸ್‌ ಹಾಗೂ ವಿಶ್ವ ಹಿಂದೂ ಪರಿಷತ್‌ ಪ್ರತಿನಿಧಿಗಳು ಮುನ್ನಡೆಸುತ್ತಿರುವುದರಿಂದ ಅಯೋಧ್ಯೆ ಶ್ರೀರಾಮ ಮಂದಿರದ ಹುಂಡಿ ಕಳವು ಪ್ರಕರಣದ ಸಂಪೂರ್ಣ ಹೊಣೆಯನ್ನು ಆ ಸಂಘಟನೆಗಳೇ ಹೊತ್ತುಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ ಮಾತನಾಡಿ, ಆರ್‌ಎಸ್‌ಎಸ್‌ ಹಿಂದೂ ವಿರೋಧಿ ಹಾಗೂ ಚಾರಿತ್ರ್ಯಹೀನ ಸಂಘಟನೆ, ಬಿಜೆಪಿ ಭ್ರಷ್ಟಾಚಾರಿಗಳ ಪಕ್ಷವಾಗಿದೆ ಎಂದು ಆರೋಪಿಸಿದರು.

ಬಸವಣ್ಣ ಪ್ರತಿಪಾದಿಸಿದ ಸಮಾನತೆ, ತತ್ವ-ಸಿದ್ಧಾಂತಗಳಿಗೆ ಆರ್‌ಎಸ್‌ಎಸ್‌ ನೀತಿಗಳು ವಿರುದ್ಧವಾಗಿವೆ. ರೈತರು, ನಿರುದ್ಯೋಗ ಹಾಗೂ ಭ್ರಷ್ಟಾಚಾರದಂತಹ ಜನಜೀವನದ ಸಮಸ್ಯೆಗಳ ಬಗ್ಗೆ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್‌ ಮಾತನಾಡದೆ, ಅಹಿಂದ ವರ್ಗದ ಯುವಕರಲ್ಲಿ ಜಾತಿ-ಧರ್ಮದ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

Tags:

error: Content is protected !!