ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ಅವರ ನಿಧನಕ್ಕೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ವಿಜಯಪುರ ನಗರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಶಾಸಕ ಯತ್ನಾಳ ಚೆನ್ನಮ್ಮ ಅವರು ವಯೋಸಹಜ ಅನಾರೋಗ್ಯ ದಿಂದ ನಿಧನರಾಗಿರುವುದು ದುಃಖದ ಸಂಗತಿಯಾಗಿದೆ. ದೇವೇಗೌಡರ ರಾಜಕೀಯ ಜೀವನ ಹಾಗೂ ಭವಿಷ್ಯ ರೂಪುಗೊಳ್ಳುವಲ್ಲಿ ಚೆನ್ನಮ್ಮ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿತ್ತು ಎಂದು ಅವರು ಹೇಳಿದರು. ಚೆನ್ನಮ್ಮ ಅವರು ಅಪಾರ ದೈವಭಕ್ತರಾಗಿದ್ದರು. ನಾನು ದೇವೇಗೌಡರ ಮನೆಗೆ ಹೋದಾಗ ಅನೇಕ ಬಾರಿ ಅವರನ್ನು ಭೇಟಿಯಾಗಿದ್ದೇನೆ. ಅವರು ಪ್ರತಿದಿನ ಗೋ ಪೂಜೆ ಹಾಗೂ ಸೂರ್ಯನಾರಾಯಣನ ಪೂಜೆ ಮಾಡುತ್ತಿದ್ದರು. ಅವರ ಪೂಜೆಯ ಫಲದಿಂದಲೇ ದೇವೇಗೌಡರು ಹಾಗೂ ಅವರ ಕುಟುಂಬ ರಾಜಕೀಯದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸಿದ್ದಾರೆ ಎಂಬುದು ನನ್ನ ನಂಬಿಕೆ,” ಎಂದು ಯತ್ನಾಳ ಹೇಳಿದರು. ಚೆನ್ನಮ್ಮ ಅವರ ನಿಧನದಿಂದ ರಾಜ್ಯದ ಜನತೆ ಶೋಕದಲ್ಲಿದ್ದು, ಈ ದುಃಖದಲ್ಲಿ ನಾವೆಲ್ಲರೂ ಭಾಗಿಯಾಗಿದ್ದೇವೆ. ಭಗವಂತರು ಅವರಿಗೆ ಸದ್ಗತಿ ನೀಡಲಿ, ಪುನರ್ಜನ್ಮ ದೊರಕಲಿ ಎಂದು ಪ್ರಾರ್ಥಿಸುತ್ತಾ ಶ್ರದ್ಧಾಂಜಲಿ ಸಲ್ಲಿಸುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ.

