ರಾಜ್ಯದಲ್ಲಿ ತೀವ್ರ ಬರಗಾಲದ ಪರಿಸ್ಥಿತಿ ಎದುರಾಗಿದ್ದರೂ ಸರ್ಕಾರ ಇನ್ನೂ ಯಾವುದೇ ಪರಿಣಾಮಕಾರಿ ನಿರ್ಧಾರ ಕೈಗೊಂಡಿಲ್ಲ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಆರೋಪಿಸಿದರು. ವಿಜಯಪುರ ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟದ ವಿಚಾರವಾಗಿ ಮುಖ್ಯಮಂತ್ರಿ ಸೇರಿದಂತೆ ಹಲವು ಸಚಿವರು ದೆಹಲಿಯಲ್ಲಿ ವಾರಗಟ್ಟಲೆ ತಂಗಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಯಾರನ್ನು ಸಚಿವರನ್ನಾಗಿ ಮಾಡಬೇಕು, ಯಾರನ್ನು ಬಿಡಬೇಕು ಎಂಬುದು ಆ ಪಕ್ಷದ ಆಂತರಿಕ ವಿಷಯ. ಆದರೆ, ರಾಜ್ಯದಲ್ಲಿ ಬರಗಾಲದಂತಹ ಗಂಭೀರ ಪರಿಸ್ಥಿತಿ ಇರುವಾಗ ಜನರ ಸಮಸ್ಯೆಗಳತ್ತ ಗಮನಹರಿ ಸುವುದು ಸರ್ಕಾರದ ಮೊದಲ ಆದ್ಯತೆಯಾಗಬೇಕು ಎಂದು ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವರು ಕನಿಷ್ಠ ವಾರಕ್ಕೊಮ್ಮೆ ತಮ್ಮ ಜಿಲ್ಲೆಗಳಿಗೆ ಭೇಟಿ ನೀಡಿ ಬರಗಾಲದ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸ ಬೇಕು. ಕೇವಲ ಕೇಂದ್ರ ಸರ್ಕಾರವನ್ನು ಟೀಕಿಸುವುದರಿಂದ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಕೇಂದ್ರ ಸರ್ಕಾರಕ್ಕೂ ತನ್ನ ಜವಾಬ್ದಾರಿ ಇದೆ, ಅದನ್ನೂ ನಿರ್ವಹಿಸಬೇಕು ಎಂದು ಹೇಳಿದರು.

ಬರಗಾಲದಿಂದ ತತ್ತರಿಸಿರುವ ನಿಜವಾದ ರೈತರು ಆತ್ಮಹತ್ಯೆಯಂತಹ ದುರ್ಘಟನೆಗಳಿಗೆ ಒಳಗಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ರೈತರಿಗೆ ಮಾನಸಿಕ ಸ್ಥೈರ್ಯ ತುಂಬಬೇಕು. “ರೈತರು ಭಯಪಡಬೇಡಿ, ಸರ್ಕಾರ ನಿಮ್ಮ ನೆರವಿಗೆ ಬರುತ್ತದೆ” ಎಂಬ ಭರವಸೆ ನೀಡಬೇಕಾದ ನಾಯಕರು ದೆಹಲಿಯಲ್ಲಿ ಕುಳಿತಿದ್ದಾರೆ ಎಂದು ಯತ್ನಾಳ್ ಟೀಕಿಸಿದರು.
ದೆಹಲಿಯಲ್ಲಿ ಇರುವ ಕಾಂಗ್ರೆಸ್ ನಾಯಕರು ಹಾಗೂ ಸಚಿವರನ್ನು ತಕ್ಷಣ ರಾಜ್ಯಕ್ಕೆ ಕಳುಹಿಸಿ, ಬರಗಾಲ ನಿರ್ವಹಣೆಗೆ ತೊಡಗಿಸಬೇಕು ಎಂದು ಕಾಂಗ್ರೆಸ್ ಹೈಕಮಾಂಡ್‌ಗೆ ಯತ್ನಾಳ್ ಒತ್ತಾಯಿಸಿದರು.
