Belagavi

ಬೆಳಗಾವಿ ಎಸಿ ವಿರುದ್ಧ ದಲಿತ ಸಂಘಟನೆಗಳ ಬೃಹತ್ ಆಕ್ರೋಶ…

Share

ಬೆಳಗಾವಿ ಉಪವಿಭಾಗಾಧಿಕಾರಿ ಶ್ರವಣಕುಮಾರ್ ನಾಯ್ಕ್ ಅವರ ಏಕಪಕ್ಷೀಯ ಹಾಗೂ ದಲಿತ ವಿರೋಧಿ ಧೋರಣೆಯನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ಇಂದು ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿತು.

ಬೆಳಗಾವಿ ಎಸಿ ಶ್ರವಣಕುಮಾರ್ ನಾಯ್ಕ್ ಅವರು ಏಕಪಕ್ಷೀಯ ಧೋರಣೆ ತೋರುತ್ತಿದ್ದಾರೆಂದು ಆರೋಪಿಸಿ ಇಂದು ಬೆಳಗಾವಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ದಿಂದ ಘೋಷಣೆಗಳನ್ನು ಬೃಹತ್ ಪ್ರತಿಭಟನಾ ರ್ಯಾಲಿಯನ್ನು ನಡೆಸಲಾಯಿತು. ಇದೇ ವೇಳೆ ಎಸಿ ಅವರ ಪ್ರತಿಕೃತಿ ದಹಿಸಲು ಮುಂದಾದ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಕೊನೆಗೆ ಪೊಲೀಸರು ಪ್ರತಿಕೃತಿಯನ್ನು ದಹಿಸಲು ಅನುವು ಮಾಡಿಕೊಡದೇ, ಪ್ರತಿಭಟನಾಕಾರರಿಂದ ಕಸಿದು ಅದನ್ನು ಬೇರೆಡೆ ಸಾಗಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ರಾಜ್ಯ ಖಜಾಂಚಿ ಸಿದ್ದಪ್ಪ ಕಾಂಬಳೆ ಅವರು ಎಸಿ ಕಚೇರಿಯ ಭ್ರಷ್ಟ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಚೇರಿಯಲ್ಲಿ ಬಡವರ ಫೈಲ್‌ಗಳನ್ನು ಸರಿಯಾಗಿ ವಿಲೇವಾರಿ ಮಾಡದೆ ಉಲ್ಟಾ ಮಾಡಲಾಗುತ್ತಿದ್ದು, ಯಾವುದೇ ನೋಟಿಸ್ ನೀಡದೆ ಏಕಪಕ್ಷೀಯವಾಗಿ ಆದೇಶಗಳನ್ನು ರದ್ದುಗೊಳಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು. ಅಧಿಕಾರಿಗಳಾದ ಶ್ರವಣ್ ನಾಯಕ್ ಮತ್ತು ಪ್ರಕಾಶ್ ಮೇದಾರ್ ಅವರು ಹಣ ನೀಡುವವರ ಕೆಲಸಗಳನ್ನು ಮಾತ್ರ ಮಾಡುತ್ತಾ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ದೂರಿದ ಅವರು ಬಡವರ ಫೈಲ್‌ಗಳನ್ನು ಧೂಳು ಹಿಡಿಯುವಂತೆ ಮಾಡಿರುವ ಇಬ್ಬರೂ ಅಧಿಕಾರಿಗಳನ್ನು ತಕ್ಷಣವೇ ಜಿಲ್ಲೆಯಿಂದ ಹೊರಹಾಕಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ಬೆಳಗಾವಿ ಜಿಲ್ಲಾಧ್ಯಕ್ಷ ಮಹಾಂತೇಶ್ ತಳವಾರ್ ಅವರು ಸಹಾಯಕ ಆಯುಕ್ತರ ವರ್ತನೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಸಿ ಅವರು ದಲಿತರನ್ನು ಅತ್ಯಂತ ಕೀಳಾಗಿ ಕಾಣುತ್ತಿದ್ದು, ಕಚೇರಿಗೆ ಹೋದರೆ ಕನಿಷ್ಠ ಒಳಗೆ ಕರೆಯದೆ ಕಾರಿನಲ್ಲಿ ಕುಳಿತು ಮಾತನಾಡುವ ಅಹಂಕಾರ ಪ್ರದರ್ಶಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಅಷ್ಟೇ ಅಲ್ಲದೆ, ಖಾನಾಪುರ ತಾಲೂಕಿನಲ್ಲಿ ಡೋಂಬರ ಸಮುದಾಯದ ದಲಿತರು ವರ್ಷಗಳಿಂದ ಬಳಕೆ ಮಾಡುತ್ತಿದ್ದ ಸ್ಮಶಾನ ಭೂಮಿಯನ್ನು ಖಾಸಗಿಯವರಿಗೆ ವಹಿಸಿಕೊಟ್ಟು, ಪ್ರತಿಭಟಿಸಿದ ದಲಿತರ ಮೇಲೆಯೇ ಸುಳ್ಳು ಕೇಸ್ ಹಾಕಿ ಜೈಲಿಗೆ ತಳ್ಳುವ ಸಂಚು ರೂಪಿಸಿದ್ದಾರೆ ಎಂದು ದೂರಿದರು. ಪ್ರಜಾಪ್ರಭುತ್ವದಲ್ಲಿ ಸಾರ್ವಜನಿಕರೇ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಅಧಿಕಾರ ನೀಡಿದ್ದು, ತಾವೇನು ರಾಜ-ಮಹಾರಾಜರಲ್ಲ ಎಂಬುದನ್ನು ಅಧಿಕಾರಿಗಳು ನೆನಪಿನಲ್ಲಿಡಬೇಕು ಎಂದು ಎಚ್ಚರಿಸಿದ ಪ್ರತಿಭಟನಾಕಾರರು ದಲಿತ ವಿರೋಧಿ ಧೋರಣೆ ತಳೆದಿರುವ ಈ ಭ್ರಷ್ಟ ಅಧಿಕಾರಿಯನ್ನು ಕೂಡಲೇ ಸೇವೆಯಿಂದ ವಜಾಗೊಳಿಸಿ, ಅಟ್ರಾಸಿಟಿ ಕಾಯ್ದೆಯಡಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಈ ಕುರಿತಾದ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು. ಈ ವೇಳೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ಬೆಳಗಾವಿಯ ಪದಾಧಿಕಾರಿಗಳು ಮತ್ತು ದಲಿತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ಧರು.

Tags:

error: Content is protected !!