ಖಾನಾಪುರದ ಹೆಸ್ಕಾಂ ಕಚೇರಿಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಮಾಸಿಕ ಗ್ರಾಹಕ ಸಂವಾದ ಸಭೆಗೆ ಜಿಟಿ ಜಿಟಿ ಮಳೆ ಅಡ್ಡಿಯಾಗಿದೆ. ಮಳೆಯ ಕಾರಣದಿಂದಾಗಿ ಸಾರ್ವಜನಿಕರು ಸಭೆಯಿಂದ ದೂರ ಉಳಿದಿದ್ದು, ಇಡೀ ದಿನ ನಡೆದ ಪ್ರಕ್ರಿಯೆಯಲ್ಲಿ ಕೇವಲ ಎರಡೇ ಎರಡು ದೂರುಗಳು ದಾಖಲಾಗಿವೆ.

ಖಾನಾಪುರ ಹೆಸ್ಕಾಂ ಕಚೇರಿಯಲ್ಲಿ ಕಾರ್ಯನಿರ್ವಾಹಕ ಅಭಿಯಂತರ ಪ್ರವೀಣ್ ಬರೆಗಾಲೆ ಅಧ್ಯಕ್ಷತೆಯಲ್ಲಿ ಶನಿವಾರ ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 2:30 ರವರೆಗೆ ಗ್ರಾಹಕ ಸಂವಾದ ಸಭೆ ನಡೆಯಿತು. ಮಳೆಯ ಆರ್ಭಟದಿಂದಾಗಿ ಸಭೆಗೆ ಗ್ರಾಹಕರು ಬಾರದ ಹಿನ್ನೆಲೆ, ನಂದಗಡದ ವಾಸೀಮ್ ಎಂಬುವವರು ಮೀಟರ್ ಬಿಲ್‌ನಲ್ಲಿ ಹೆಸರು ಬದಲಾವಣೆ ಹಾಗೂ ದಾರೋಳಿಯ ವಿಶಾಲ್ ಕಾಳೆ ಎಂಬುವವರು ಅಕ್ರಮ-ಸಕ್ರಮ ಯೋಜನೆಯ ಹಣ ಮರುಪಾವತಿಗೆ ಕೋರಿ ಕೇವಲ ಎರಡು ದೂರುಗಳನ್ನು ಮಾತ್ರ ಸಲ್ಲಿಸಿದರು. ಪ್ರತಿ ತಿಂಗಳು ಕಚೇರಿ ಮುಂದೆ ಧರಣಿ ನಡೆಸುವ ಸಾರ್ವಜನಿಕರು, ನೇರವಾಗಿ ಸಮಸ್ಯೆ ಬಗೆಹರಿಸುವ ಇಂತಹ ಮಾಸಿಕ ಸಭೆಗಳಿಗೆ ಕಡ್ಡಾಯವಾಗಿ ಹಾಜರಾಗಿ ಇದರ ಮಹತ್ವ ಪಡೆದುಕೊಳ್ಳಬೇಕು ಎಂದು ಹೆಸ್ಕಾಂ ಅಧಿಕಾರಿಗಳು ಮನವಿ ಮಾಡಿದ್ದಾರೆ.
