ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಭೂಸ್ವಾಧೀನಪಡಿಸಿಕೊಂಡಿರುವ ಜಮೀನಿಗೆ ಹೆಚ್ಚಿನ ಪರಿಹಾರಟ ನೀಡಬೇಕು ಹಾಗೂ ತಾಲೂಕಿನ ಸಮಗ್ರ ನೀರಾವರಿ ಯೋಜನೆಗಳನ್ನು ಶೀಘ್ರ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಸಾವಿರಾರು ರೈತರು ಚಿಕ್ಕೋಡಿಯಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಸಿದರು.


ಪಟ್ಟಣದ ಪ್ರಮುಖ ಕೇಂದ್ರವಾದ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ಸಾವಿರಾರು ರೈತರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯ ಭಾಗವಾಗಿ ಪ್ರಮುಖ ರಸ್ತೆಯಲ್ಲಿ ಎತ್ತಿನ ಬಂಡಿಗಳನ್ನು ಸಾಲಾಗಿ ಕಟ್ಟಿ ನಿಲ್ಲಿಸುವ ಮೂಲಕ ಸಂಚಾರ ತಡೆದು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ಈ ಬೃಹತ್ ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಹಾಗೂ ಸ್ಥಳೀಯ ಮಠಾಧೀಶರು ಭಾಗವಹಿಸಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಶಶಿಕಾಂತ ಗೂರೂಜಿ, ಅಧ್ಯಕ್ಷ ಚೂನ್ನಪ್ಪ ಪೂಜೇರಿ, ಉಪಾಧ್ಯಕ್ಷ ಸತ್ಯಪ್ಪ ಮಲ್ಲಾಪೂರೆ, ಚಿಕ್ಕೋಡಿಯ ಸಂಪಾದನಾ ಸ್ವಾಮೀಜಿ ಹಾಗೂ ಚಿಂಚಣಿಯ ಶಿವಪ್ರಸಾದ ದೇವರು ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದು, ರೈತರ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ತಕ್ಷಣವೇ ಈಡೇರಿಸಬೇಕು ಎಂದು ಆಗ್ರಹಿಸಿದರು.
