Belagavi

ಬೆಳಗಾವಿಯಲ್ಲಿ ರೈತರ ಬೃಹತ್ ಪ್ರತಿಭಟನೆ: ರಾಜ್ಯಾದ್ಯಂತ ಬರ ಘೋಷಣೆ ಹಾಗೂ ಎಕರೆಗೆ ₹50,000 ಪರಿಹಾರಕ್ಕೆ ಆಗ್ರಹ

Share

ರಾಜ್ಯಾದ್ಯಂತ ತೀವ್ರಗೊಳ್ಳುತ್ತಿರುವ ಬರ ಪರಿಸ್ಥಿತಿ ಹಾಗೂ ಬೆಳೆ ಹಾನಿಯಿಂದ ಕಂಗಾಲಾಗಿರುವ ರೈತರು ಇಂದು ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ನಡೆದ ಈ ಹೋರಾಟದಲ್ಲಿ, ರಾಜ್ಯ ಸರ್ಕಾರ ತಕ್ಷಣವೇ ಬರ ಪರಿಹಾರ ಘೋಷಿಸಬೇಕು ಹಾಗೂ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಲಾಯಿತು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ರಾಜ್ಯಾಧ್ಯಕ್ಷ ವಾಸುದೇವ ಮೇಠಿ ಮತ್ತು ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರ ಮಾರ್ಗದರ್ಶನದಲ್ಲಿ ಇಂದು ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಯಿತು. ನಗರದ ಐತಿಹಾಸಿಕ ರಾಣಿ ಚೆನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿಗಳ ಕಾರ್ಯಾಲಯದವರೆಗೆ ಸಾವಿರಾರು ರೈತರು ಹಾಗೂ ರೈತ ಮಹಿಳೆಯರು ಕಾಲ್ನಡಿಗೆ ಜಾಥಾ ನಡೆಸಿದರು. ಕೆಲಕಾಲ ರಾಣಿ ಚೆನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸಂಚಾರ ತಡೆದು, ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು.

ರಾಜ್ಯಾದ್ಯಂತ ಬರ ಘೋಷಣೆ ಮಾಡುವುದು, ಕೃಷಿ ಸಾಲ ಮನ್ನಾ ಮಾಡುವುದು, ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದು ಹಾಗೂ ವಿವಿಧ ನೀರಾವರಿ ಯೋಜನೆಗಳನ್ನು ಶೀಘ್ರ ಜಾರಿಗೆ ತರುವುದು ಈ ರ್ಯಾಲಿಯ ಮುಖ್ಯ ಉದ್ದೇಶವಾಗಿತ್ತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ರೈತ ಮುಖಂಡರು, ಮುಖ್ಯಮಂತ್ರಿಗಳು ಹಾಗೂ ಸಚಿವರು ಕೂಡ ರೈತರ ಮಕ್ಕಳಾಗಿದ್ದು, ಸದ್ಯ ಕೃಷಿಕರು ಅನುಭವಿಸುತ್ತಿರುವ ಕಷ್ಟಗಳನ್ನು ಗ್ರಹಿಸಬೇಕು ಎಂದರು. ಸೂಕ್ತ ಮಳೆಯಿಲ್ಲದೆ ಬಿತ್ತನೆ ಬೀಜ ಹಾಗೂ ಗೊಬ್ಬರ ಹಾಕಿ ಬೆಳೆಸಿದ ಬೆಳೆಗಳು ಒಣಗಿ ಹಾಳಾಗುತ್ತಿದ್ದು, ಅವುಗಳನ್ನು ದನಕರುಗಳಿಗೆ ಮೇವಾಗಿ ಹಾಕುವ ದುಸ್ಥಿತಿ ಬಂದೊದಗಿದೆ. ವಿಶೇಷವಾಗಿ ಬೆಳಗಾವಿ ಜಿಲ್ಲೆಯ ರಾಯಬಾಗ ಮತ್ತು ಮೂಡಲಗಿಯ ಕೊನೆಯ ಭಾಗದ ರೈತರಿಗೆ ಕೆನಾಲ್ ನೀರು ತಲುಪುತ್ತಿಲ್ಲ. ಹೀಗಾಗಿ ತಕ್ಷಣವೇ ರಾಜ್ಯದಲ್ಲಿ ಬರ ಪರಿಸ್ಥಿತಿ ಘೋಷಿಸಿ, ಸಂಕಷ್ಟದಲ್ಲಿರುವ ಪ್ರತಿಯೊಬ್ಬ ರೈತನಿಗೆ ಪ್ರತಿ ಎಕರೆಗೆ 50,000 ರೂಪಾಯಿ ಪರಿಹಾರ ಧನವನ್ನು ನೇರವಾಗಿ ಅವರ ಖಾತೆಗೆ ಜಮೆ ಮಾಡಬೇಕು ಎಂದು ಆಗ್ರಹಿಸಿದರು.

ಇದಲ್ಲದೆ, ಕಬ್ಬು ಹಾಗೂ ಮೆಕ್ಕೆಜೋಳ ಬೆಳೆಗಳು ಒಣಗಿ ಹೋಗುತ್ತಿರುವುದರಿಂದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ತಕ್ಷಣವೇ ಸ್ಥಳ ಪರಿಶೀಲನೆ ನಡೆಸಿ, ರೈತರ ಕುಂದುಕೊರತೆ ಆಲಿಸಲು ಸಭೆ ಕರೆಯಬೇಕು ಎಂದು ಒತ್ತಾಯಿಸಲಾಯಿತು. ರಸಗೊಬ್ಬರ ಮತ್ತು ಬೀಜ ವಿತರಣೆಗೆ ಇರುವ ಎಫ್‌ಐಡಿ (FID) ನಿಬಂಧನೆಯನ್ನು ಸಡಿಲಿಸಿ ಎಲ್ಲ ರೈತರಿಗೂ ಸುಲಭವಾಗಿ ಗೊಬ್ಬರ ಸಿಗುವಂತೆ ಮಾಡಬೇಕು ಹಾಗೂ ರೈತರ ಸಮಸ್ಯೆಗಳ ಚರ್ಚೆಗೆ ಕನಿಷ್ಠ 60 ದಿನಗಳ ಕಾಲ ವಿಶೇಷ ಅಧಿವೇಶನ ಕರೆಯಬೇಕು ಎಂದು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ
ರೈತರು ರೈತ ಮಹಿಳೆಯರು ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.

ರೈತ ಹೋರಾಟಗಾರರು ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿ ಮಾಲಾರ್ಪಣೆ ಮಾಡಿ, ರೈತರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರದ ಗಮನ ಸೆಳೆಯುವಂತೆ ಆಗ್ರಹಿಸಿದರು.

Tags:

error: Content is protected !!