ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿ ಪ್ರಕ್ರಿಯೆಯು ಸಂಪೂರ್ಣ ಪಾರದರ್ಶಕವಾಗಿ ಹಾಗೂ ಅರ್ಹತೆಯ ಆಧಾರದ ಮೇಲೆಯೇ ನಡೆಯಲಿದೆ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಅಣ್ಣಾಸಾಹೇಬ ಜೊಲ್ಲೆ ಅವರು ಸ್ಪಷ್ಟಪಡಿಸಿದ್ದಾರೆ.

ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ವಿಡಿಯೋ ಬಿಡುಗಡೆ ಮಾಡಿದ ಅವರು, ಬ್ಯಾಂಕ್ನಲ್ಲಿ ಸದ್ಯ ಖಾಲಿ ಇರುವ ಒಟ್ಟು 104 ಸಿಬ್ಬಂದಿಗಳ ನೇಮಕಾತಿಗೆ ಚಾಲನೆ ನೀಡಲಾಗಿದೆ. ಇದರಲ್ಲಿ ದ್ವಿತೀಯ ದರ್ಜೆ ಗುಮಾಸ್ತರು – 83, ಸಿಪಾಯಿ – 20 ಹಾಗೂ ಗನ್ಮ್ಯಾನ್ – 01 ಹುದ್ದೆಗಳು ಸೇರಿವೆ ಎಂದು ವಿವರ ನೀಡಿದರು.
ನೇಮಕಾತಿ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಅಕ್ರಮಗಳಿಗೆ ಆಸ್ಪದವಿಲ್ಲ. ಅಭ್ಯರ್ಥಿಗಳ ಪ್ರತಿಭೆ, ಅರ್ಹತೆ ಮತ್ತು ನಿಯಮಾವಳಿಗಳ ಪ್ರಕಾರವೇ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಹೀಗಾಗಿ ಉದ್ಯೋಗಾಕಾಂಕ್ಷಿಗಳು ಹಾಗೂ ಪೋಷಕರು ಯಾವುದೇ ಕಾರಣಕ್ಕೂ ಮಧ್ಯವರ್ತಿಗಳು, ದಲಾಲಿಗಳು ಅಥವಾ ಏಜೆಂಟರ ಆಮಿಷಕ್ಕೆ ಒಳಗಾಗಬಾರದು. ಯಾರಾದರೂ ಕೆಲಸ ಕೊಡಿಸುವುದಾಗಿ ಹಣ ಕೇಳಿದರೆ ಅಂತಹವರನ್ನು ಯಾವುದೇ ಕಾರಣಕ್ಕೂ ನಂಬಬಾರದು ಎಂದು ಅವರು ಎಚ್ಚರಿಸಿದ್ದಾರೆ.
ಅರ್ಹ ಹಾಗೂ ಸಕ್ಷಮ ಅಭ್ಯರ್ಥಿಗಳಿಗೆ ಸೂಕ್ತ ಅವಕಾಶ ಕಲ್ಪಿಸಿ, ಬ್ಯಾಂಕಿನ ಕಾರ್ಯಕ್ಷಮತೆಯನ್ನು ಮತ್ತಷ್ಟು ಹೆಚ್ಚಿಸುವುದೇ ನಮ್ಮ ಮುಖ್ಯ ಉದ್ದೇಶವಾಗಿದೆ ಎಂದು ಈ ಸಂದರ್ಭದಲ್ಲಿ ಅಣ್ಣಾಸಾಹೇಬ ಜೊಲ್ಲೆ ಅವರು ತಿಳಿಸಿದರು.
