ಪ್ರೀತಿಸುತ್ತಿದ್ದ ಯುವತಿಯನ್ನ ಮನೆಯವರೇ ಕೊಲೆ ಮಾಡಿದ ಬೆನ್ನಲ್ಲೇ, ಆಕೆಯ ಅಗಲಿಕೆ ತಡೆಯಲಾರದೆ ಪ್ರೇಮಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಧೃತಿಗೆಡಿಸುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ನಡೆದಿದೆ. ಪ್ರೇಯಸಿಯ ಹುಟ್ಟುಹಬ್ಬದ ದಿನದಂದೇ ಯುವಕ ನೇಣಿಗೆ ಶರಣಾಗಿದ್ದಾನೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನದಿಗುಡಕೇತರ ನಿವಾಸಿಯಾದ ಕೃಷ್ಣಾ ಸಹದೇವ ಪಾಟೀಲ (30) ಹಾಗೂ ರಾಯಬಾಗ ತಾಲೂಕಿನ ಹುಬ್ಬರವಾಡಿಯ ವಿವಾಹಿತೆ ಸತ್ತೆವ್ವಾ ಸಂತೋಷ ಹೆಳವಿ ಪರಸ್ಪರ ಪ್ರೀತಿಸುತ್ತಿದ್ದರು. ಇತ್ತೀಚೆಗೆ ಇಬ್ಬರೂ ಮನೆ ಬಿಟ್ಟು ಹೋಗಿದ್ದಾಗ ಪೊಲೀಸರು ಪತ್ತೆ ಹಚ್ಚಿ ವಾಪಸ್ ಕಳುಹಿಸಿದ್ದರು. ಆದರೆ, ಸತ್ತೆವ್ವಾಳ ತವರು ಮನೆಯವರು ಆಕೆಯನ್ನು ಮಹಾರಾಷ್ಟ್ರದ ಅರಗಗೆ ಕರೆದೊಯ್ದು, ಕೃಷ್ಣಾನನ್ನು ಬಿಟ್ಟಿರುವಂತೆ ಒತ್ತಾಯಿಸಿದ್ದರು. ಇದಕ್ಕೆ ಸತ್ತೆವ್ವಾ ನಿರಾಕರಿಸಿ ಹಠ ಹಿಡಿದಿದ್ದರಿಂದ, ಆಕೆಯ ತವರು ಮನೆಯವರೇ ಆಕೆಯನ್ನು ಕ್ರೂರವಾಗಿ ಕೊಲೆ ಮಾಡಿದ್ದರು. ಪ್ರೇಯಸಿ ಕಾಣದೇ ಗಾಬರಿಗೊಂಡಿದ್ದ ಕೃಷ್ಣಾ ನೀಡಿದ ದೂರಿನ ಮೇರೆಗೆ ಯಮಕನಮರಡಿ ಸಿಪಿಐ ಜಾವೀದ್ ಮುಶಾಪುರೆ ನೇತೃತ್ವದ ಪೊಲೀಸರು ತನಿಖೆ ನಡೆಸಿ, ಮೂವರು ಆರೋಪಿಗಳನ್ನು ಬಂಧಿಸಿ ಪ್ರಕರಣವನ್ನು ಮಹಾರಾಷ್ಟ್ರದ ಮಿರಜ ಗ್ರಾಮೀಣ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದರು.


ತಾನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದ ಸತ್ತೆವ್ವಾ ಕೊಲೆಯಾದ ದುಃಖದಲ್ಲಿದ್ದ ಕೃಷ್ಣಾ ತೀವ್ರ ಮನನೊಂದಿದ್ದನು. ಜೂನ್ 4, 2026ರಂದು ಮೃತ ಸತ್ತೆವ್ವಾಳ ಜನ್ಮದಿನವಾಗಿದ್ದು, ಅದೇ ದಿನದಂದು ಕೃಷ್ಣಾ ನದಿಗುಡಕೇತರದಲ್ಲಿರುವ ತನ್ನ ಮನೆಯಲ್ಲಿ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರೇಯಸಿಯ ಹುಟ್ಟುಹಬ್ಬದ ದಿನವೇ ಪ್ರೇಮಿಯೂ ಸಾವಿನ ಹಾದಿ ಹಿಡಿದಿರುವುದು ತಾಲೂಕಿನಲ್ಲಿ ತೀವ್ರ ಸಂಚಲನ ಮೂಡಿಸಿದೆ. ಈ ಕುರಿತು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
