ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತವನ್ನು ಖಂಡಿಸಿ ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಆಕ್ರೋಶಿತ ಕಾರ್ಯಕರ್ತರು ಮುಧೋಳ ನಗರಸಭೆ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ತಡೆದಿದ್ದು, ಈ ವೇಳೆ ಉಭಯತರ ನಡುವೆ ಭಾರಿ ತಳ್ಳಾಟ-ನೂಕಾಟ ಜರುಗಿದ.


ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದ ವೈಫಲ್ಯ ಹಾಗೂ ದುರಾಡಳಿತದ ವಿರುದ್ಧ ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದಲ್ಲಿ ಇಂದು ಬಿಜೆಪಿ ವತಿಯಿಂದ ದಿಕ್ಖಾರಗಳ ಸರಣಿ ಮೊಳಗಿತು. ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಾ ನೇರವಾಗಿ ಮುಧೋಳ ನಗರಸಭೆ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದರು. ಈ ವೇಳೆ ಕಚೇರಿಯ ಒಳಗೆ ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಸ್ಥಳದಲ್ಲಿ ನಿಯೋಜನೆಗೊಂಡಿದ್ದ ಪೊಲೀಸರು ಹರಸಾಹಸ ಪಡಬೇಕಾಯಿತು.


ಬ್ಯಾರಿಕೇಡ್ಗಳನ್ನು ದಾಟಿ ಮುನ್ನುಗ್ಗುತ್ತಿದ್ದ ಕಾರ್ಯಕರ್ತರನ್ನು ತಡೆಯುವಾಗ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ತೀವ್ರ ವಾಗ್ವಾದ ಹಾಗೂ ತಳ್ಳಾಟ-ನೂಕಾಟ ನಡೆದು ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಕೂಡಲೇ ಆಡಳಿತ ವ್ಯವಸ್ಥೆ ಸುಧಾರಿಸದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
