Bagalkot

ಬಾಗಲಕೋಟೆ ಶಹರ್ ಠಾಣೆ ಪೊಲೀಸರ ಭರ್ಜರಿ ಬೇಟೆ: ಅಂತರ್ ಜಿಲ್ಲಾ ಮನೆಗಳ್ಳನ ಬಂಧನ, 22 ಲಕ್ಷದ ಚಿನ್ನಾಭರಣ ವಶ!

Share

ಬಾಗಲಕೋಟೆ ಜಿಲ್ಲೆಯ ಚೌಡಾಪೂರ ಗ್ರಾಮದಲ್ಲಿ ನಡೆದಿದ್ದ ಭಾರಿ ಮನೆ ಕಳ್ಳತನ ಪ್ರಕರಣವನ್ನು ಬಾಗಲಕೋಟೆ ಶಹರ ಪೊಲೀಸರು ಕೇವಲ ಕೆಲವೇ ದಿನಗಳಲ್ಲಿ ಯಶಸ್ವಿಯಾಗಿ ಭೇದಿಸಿದ್ದಾರೆ. ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕ ಮೂಡಿಸಿದ್ದ ಈ ಪ್ರಕರಣದ ಅಂತರ್ ಜಿಲ್ಲಾ ಆರೋಪಿಯನ್ನು ಬಂಧಿಸಿ, ಆತನಿಂದ ಲಕ್ಷಾಂತರ ಮೌಲ್ಯದ ಚಿನ್ನದ ಆಭರಣಗಳನ್ನು ಜಪ್ತಿ ಮಾಡಲಾಗಿದೆ.


ಕಳೆದ ಮಾರ್ಚ್ 19 ರಂದು ಚೌಡಾಪೂರ ಗ್ರಾಮದ ನಿವಾಸಿ ಪುಂಡಲಿಕಪ್ಪ ಪಾಟೀಲ್ ಅವರ ಮನೆಯ ಬೀಗ ಒಡೆದು ಕನ್ನ ಹಾಕಿದ್ದ ವಿಜಯಪುರ ಜಿಲ್ಲೆಯ ಹಾವಿನಹಾಳ ಗ್ರಾಮದ ನಿವಾಸಿ ಮೋದಿನಸಾಬ್ ಎಂಬ ಐನಾತಿ ಕಳ್ಳನನ್ನು ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಮನೆಯವರು ಹೊರಹೋಗಿದ್ದನ್ನು ಗಮನಿಸಿ ನುಗ್ಗಿದ್ದ ಈ ಖದೀಮ, ಸುಮಾರು 221 ಗ್ರಾಂ ಬಂಗಾರ, 600 ಗ್ರಾಂ ಬೆಳ್ಳಿ ಆಭರಣ ಹಾಗೂ 50 ಸಾವಿರ ನಗದನ್ನು ದೋಚಿ ಪರಾರಿಯಾಗಿದ್ದನು.

ಈ ಕುರಿತು ಮಾಲೀಕರು ನೀಡಿದ ದೂರಿನ ಮೇರೆಗೆ ಬಾಗಲಕೋಟೆ ಶಹರ ಪೊಲೀಸರು ವಿಶೇಷ ತಂಡ ರಚಿಸಿ ಜಾಲ ಬೀಸಿದ್ದರು. ಬಾಗಲಕೋಟೆ ನಗರದ ವ್ಯಾಪ್ತಿಯಲ್ಲಿ ಸಂಶಯಾಸ್ಪದವಾಗಿ ಓಡಾಡುತ್ತಿದ್ದ ಮೋದಿನಸಾಬ್‌ನನ್ನು ವಶಕ್ಕೆ ಪಡೆದು ಕಟ್ಟುನಿಟ್ಟಿನ ವಿಚಾರಣೆ ನಡೆಸಿದಾಗ ಕಳ್ಳತನದ ರಹಸ್ಯ ಬಯಲಾಗಿದೆ.

ಸದ್ಯ ಆರೋಪಿಯಿಂದ ಅಂದಾಜು 22 ಲಕ್ಷ ರೂಪಾಯಿ ಮೌಲ್ಯದ ಕದ್ದ ಮಾಲನ್ನು ವಶಪಡಿಸಿಕೊಳ್ಳಲಾಗಿದ್ದು, ಬಾಗಲಕೋಟೆ ಶಹರ ಪೊಲೀಸ್ ಠಾಣೆಯಲ್ಲಿ ಕಾನೂನು ಪ್ರಕ್ರಿಯೆ ಮುಂದುವರಿದಿದೆ.

Tags:

error: Content is protected !!