ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣವರ ಸಂಸ್ಥೆಯ ಬಹುಕೋಟಿ ವಂಚನೆ ಪ್ರಕರಣದ ಬೆನ್ನಲ್ಲೇ, ಈಗ ಮತ್ತೊಂದು ಬೃಹತ್ ಹೂಡಿಕೆ ವಂಚನೆ ಹಗರಣ ಬೆಳಕಿಗೆ ಬಂದಿದೆ. ಸಾರ್ವಜನಿಕರಿಗೆ ಬಡ್ಡಿಯ ಆಸೆ ತೋರಿಸಿ ಬರೋಬ್ಬರಿ 211 ಕೋಟಿ ರೂಪಾಯಿ ಹಣ ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ‘ಆದಿತ್ಯರಾಜ್ ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್’ ಕಚೇರಿಯನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಸಿಇಓ ಸೇರಿ 10 ಜನರ ವಿರುದ್ಧ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಹೌದು.. ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣವರ ವಂಚನೆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಬಹುಕೋಟಿ ಹಣ ದುರುಪಯೋಗ ಪ್ರಕರಣ ಸದ್ದು ಮಾಡುತ್ತಿದೆ. ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಹೂಡಿಕೆ ಪಡೆದು ವಂಚಿಸಿರುವ ಆರೋಪದ ಮೇಲೆ ಆದಿತ್ಯರಾಜ್ ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್ ಕಚೇರಿಯನ್ನು ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಸೀಜ್ ಮಾಡಲಾಗಿದೆ. ಸಹಕಾರ ಇಲಾಖೆಯ ಸಹಾಯಕ ನಿಬಂಧಕರಾದ ಜಬಿವುಲ್ಲಾ ಅವರು ನೀಡಿದ ದೂರಿನನ್ವಯ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಕಂಪನಿ ಮತ್ತು ಸಿಇಓ ಸೇರಿ ಒಟ್ಟು 10 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇದರಲ್ಲಿ ಎ1 ಆರೋಪಿಯಾಗಿ ಆದಿತ್ಯರಾಜ್ ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್ ಕಂಪನಿ, ಎ2 ಆದಿತ್ಯರಾಜ್ ಕಮೊಡಿಟಿಸ್, ಎ3 ಆದಿತ್ಯರಾಜ್ ಸೆಕ್ಯೂರಿಟಿ ಕಂಪನಿ ಹಾಗೂ ಎ4 ಆರೋಪಿಯಾಗಿ ಸಂಸ್ಥೆಯ ಮಾಲೀಕ ಮತ್ತು ಸಂಸ್ಥಾಪಕ ಸಿಇಓ ಆಗಿರುವ ಬಾಲರಾಜ್ ಮಾನೆ ಸೇರಿದಂತೆ 6 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇನ್ನು ಈ ಆದಿತ್ಯರಾಜ್ ಸಂಸ್ಥೆಯು ಸಾರ್ವಜನಿಕರಿಗೆ 1 ಲಕ್ಷ ರೂಪಾಯಿ ಹೂಡಿಕೆಗೆ ಬರೋಬ್ಬರಿ ಶೇಕಡಾ 5 ರಷ್ಟು ಬಡ್ಡಿ ಕೊಡುವ ಆಮಿಷ ಒಡ್ಡುತ್ತಿತ್ತು. ಇದನ್ನು ನಂಬಿದ ಸುಮಾರು 3000 ಕ್ಕೂ ಹೆಚ್ಚು ಸಾರ್ವಜನಿಕರು ಒಟ್ಟು 6500 ಕ್ಕೂ ಅಧಿಕ ಬಾರಿ ಇಲ್ಲಿ ಹೂಡಿಕೆ ಮಾಡಿದ್ದಾರೆ. ಹೀಗೆ ಸಂಗ್ರಹವಾದ ಒಟ್ಟು 211 ಕೋಟಿ ರೂಪಾಯಿ ಬೃಹತ್ ಮೊತ್ತವನ್ನು ಆರ್ಬಿಐ ಮತ್ತು ಸೆಬಿ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ ನಾಲ್ಕು ಬೇರೆ ಬೇರೆ ಬ್ಯಾಂಕ್ ಖಾತೆಗಳಲ್ಲಿ ಜಮಾ ಮಾಡಲಾಗಿದೆ. ಅಷ್ಟೇ ಅಲ್ಲದೆ, ಈ ಹಣವನ್ನು ಸ್ವಯಂ ಹಾಗೂ ಕಂಪನಿ ಹೆಸರಿನ ಖಾತೆಗಳಿಗೆ ವರ್ಗಾವಣೆ ಮಾಡಿಕೊಳ್ಳಲಾಗಿದೆ. ವಂಚನೆ ಬಯಲಾಗುತ್ತಿದ್ದಂತೆ ಡಿಜಿಟಲ್ ಮಾಹಿತಿಯನ್ನು ಡಿಲೀಟ್ ಮಾಡಿ ಆರೋಪಿಗಳು ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದಾರೆ. ಸದ್ಯ ಇವರ ವಿರುದ್ಧ ಬರ್ಡ್ಸ್ (BUDS) ಮತ್ತು ಕೆಪಿಐಡಿ (KPID) ಕಾಯ್ದೆಯಡಿ ಕಠಿಣ ಕೇಸ್ ದಾಖಲಿಸಲಾಗಿದ್ದು, ತನಿಖೆಗೆ ಸ್ಪಂದಿಸದೆ ತಲೆಮರೆಸಿಕೊಂಡಿರುವ ಹಂತಕರಿಗಾಗಿ ಖಾಕಿ ಪಡೆ ಜಾಲ ಬೀಸಿದೆ.

