ಬೆಳಗಾವಿ ನಗರದ ಮಾಳಮಾರುತಿ, ಎಪಿಎಂಸಿ ಹಾಗೂ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ವಿರುದ್ಧ ಪೊಲೀಸರು ಜಂಟಿ ಸಮರ ಸಾರಿದ್ದಾರೆ. ಮಟಕಾ ಓಸಿ ಜೂಜಾಟ, ಇಸ್ಪೀಟ್ ಅಡ್ಡೆ, ಗಾಂಜಾ ಸೇವನೆ ಹಾಗೂ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿದ್ದ ಒಟ್ಟು 14 ಜನರನ್ನು ಬಂಧಿಸಲಾಗಿದೆ.

ಮಾಳಮಾರುತಿ ಪೊಲೀಸ್ ಠಾಣೆಯ ಪಿಎಸ್‌ಐ ಆನಂದ ಆದಗೊಂಡ ಮತ್ತು ಸಿಬ್ಬಂದಿ ಮಹಾವೀರ ನಗರದಲ್ಲಿ ಓಸಿ ಮಟಕಾ ಆಟ ಆಡಿಸುತ್ತಿದ್ದ ಮಾರುತಿ ನಗರದ ಮಂಜುನಾಥ ಯಲ್ಲಪ್ಪ ತಿಗಡಿ ಹಾಗೂ ಕುಲಕರ್ಣಿ ಗಡ್ಡೆಯ ಪರಸಪ್ಪ ರಾಯಪ್ಪ ಅಲ್ಲ ಎಂಬ ಇಬ್ಬರನ್ನು ಬಂಧಿಸಿ ನಗದು ವಶಪಡಿಸಿಕೊಂಡಿದ್ದಾರೆ. ಇತ್ತ ಎಪಿಎಂಸಿ ಠಾಣೆಯ ಪಿಎಸ್‌ಐ ಎಸ್.ಕೆ. ಹೊಳೆನ್ನವರ್ ನೇತೃತ್ವದ ತಂಡ ವೈಭವ ನಗರದಲ್ಲಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದ ವೈಭವ ನಗರದ ಶಾನೂರ ಮೆಹಮೂಲ ಸಂಠಿ, ಮಹಮ್ಮದಹನೀಫ ಮುಕ್ತುಮ ಹುಸೇನ ಮುನಿಯಾರ, ಇದ್ರೀಶ ರಸೂಲ ಶೇಖ ಹಾಗೂ ಶಾಹೂ ನಗರದ ಖುರ್ಷಿದ ಆಲಮ ಶಣ್ಣೀರ ಅಹ್ಮದ ಅದಖಾನ ಎಂಬ ನಾಲ್ವರನ್ನು ಬಂಧಿಸಿತ್ತು. ಈ ನಾಲ್ವರ ನಡವಳಿಕೆ ಶಂಕಾಸ್ಪದವಾಗಿದ್ದರಿಂದ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಇವರು ಗಾಂಜಾ (ಮಾದಕ ವಸ್ತು) ಸೇವಿಸಿರುವುದು ದೃಢಪಟ್ಟಿದ್ದು, ಇವರ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಮತ್ತೊಂದು ಪ್ರಕರಣ ದಾಖಲಿಸಲಾಗಿದೆ. ಇದೇ ವೇಳೆ ಎಪಿಎಂಸಿ ಮಾರ್ಕೆಟ್ ಗೇಟ್ ಹತ್ತಿರ ಅಸಹಜವಾಗಿ ವರ್ತಿಸುತ್ತಿದ್ದ ವೈಭವ ನಗರದ ಶಾಹೀದ ಶರ ಶೇಖ ಎಂಬಾತನನ್ನು ತಪಾಸಣೆ ನಡೆಸಿದಾಗ ಗಾಂಜಾ ಸೇವನೆ ಮಾಡಿರುವುದು ಪತ್ತೆಯಾಗಿದ್ದು, ಆತನನ್ನೂ ವಶಕ್ಕೆ ಪಡೆಯಲಾಗಿದೆ. ಮತ್ತೊಂದೆಡೆ, ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುವ ಪುಂಡರ ವಿರುದ್ಧ ಮಾರ್ಕೆಟ್ ಠಾಣೆಯ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಪಿಎಸ್‌ಐ ಶ್ರೀಮತಿ ರುಕ್ಕಿಣಿ ಹಾಗೂ ಸಿಬ್ಬಂದಿ ಸಮರ್ಥ ನಗರದ 5ನೇ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ಮಾಡುತ್ತಿದ್ದ ಸಮರ್ಥ ನಗರದ ಸಂತೋಷ ಬಾಬು ದಳವಿ, ಶಹಾಪೂರ ಹೊಸೂರ ಬಸವಣ ಗಲ್ಲಿಯ ಜ್ಯೋತಿಬಾ ದಶರಥ ಶಹಾಪೂರಕರ ಮತ್ತು ಶಾಸ್ತ್ರಿ ನಗರದ ದರ್ಶನ ಮಹಾವೀರ ಶೇರಿ ಎಂಬ ಮೂವರನ್ನು ಬಂಧಿಸಿ ಅಬಕಾರಿ ಕಾಯ್ದೆಯಡಿ ಕೇಸ್ ದಾಖಲಿಸಿದ್ದಾರೆ. ಅದೇ ರೀತಿ ಸಮರ್ಥ ನಗರದ 6ನೇ ಕ್ರಾಸ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಜಂಟಿಯಾಗಿ ಮದ್ಯಪಾನ ಮಾಡುತ್ತಿದ್ದ ಸಮರ್ಥ ನಗರದ ಸುರೇಶ ಬಾಳಪ್ಪ ವ್ಯಾಪಾರಗಿ, ಬಾಂದೂರ ಗಲ್ಲಿಯ ವಿನಾಯಕ ಶಂಕರ ಸಾಂವಗಾಂವಕರ ಮತ್ತು ಮರಗಾಯಿ ಗಲ್ಲಿಯ ಅಮೃತ ಶಂಕರ ನೇಕಾರ ಎಂಬ ಮೂವರನ್ನು ಮಾರ್ಕೆಟ್ ಠಾಣೆಯ ಪಿಎಸ್‌ಐ ಪಿ ಅ ಗಂಡವ್ವಗೋಳ ಹಾಗೂ ತಂಡ ದಾಳಿ ನಡೆಸಿ ಬಂಧಿಸಿದೆ. ಸದ್ಯ ಬಂಧಿತ ಎಲ್ಲಾ 14 ಆರೋಪಿಗಳ ವಿರುದ್ಧ ಆಯಾ ಪೊಲೀಸ್ ಠಾಣೆಗಳಲ್ಲಿ ಕಾನೂನು ಕ್ರಮ ಜರುಗಿಸಿ, ಮುಂದಿನ ತನಿಖೆಯನ್ನು ಕೈಕೊಳ್ಳಲಾಗಿದೆ.

