ಬೆಳಗಾವಿಯಲ್ಲಿ ಮತ್ತೊಂದು ಸಾವಿರಾರು ಕೋಟಿ ರೂಪಾಯಿ ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ಭಾರಿ ಸಂಚಲನ ಮೂಡಿಸಿದೆ. ವಂಚನೆ ಆರೋಪ ಎದುರಿಸುತ್ತಿರುವ ಆದಿತ್ಯರಾಜ ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್ ಕಂಪನಿ ವಿರುದ್ಧ ಎಫ್ಐಆರ್ ದಾಖಲಾಗುತ್ತಿದ್ದಂತೆ ಟಿಳಕವಾಡಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಮಾಲೀಕ ಬಾಲರಾಜ್ ಮಾನೆಗೆ ಸದ್ಯ ಬಂಧನದ ಭೀತಿ ಎದುರಾಗಿದೆ.

ಬೆಳಗಾವಿಯ ಭಾಗ್ಯ ನಗರದಲ್ಲಿರುವ ಆದಿತ್ಯರಾಜ ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಕಚೇರಿಯನ್ನು ನಿನ್ನೆಯಷ್ಟೇ ಎಸಿ ಶ್ರವಣಕುಮಾರ ನೇತೃತ್ವದಲ್ಲಿ ಸೀಜ್ ಮಾಡಲಾಗಿತ್ತು. ಆದರೆ ಇಂದು ಪ್ರಕರಣದ ತನಿಖಾಧಿಕಾರಿ, ಎಸಿಪಿ ಶೇಖರಪ್ಪ ನೇತೃತ್ವದ ಪೊಲೀಸ್ ತಂಡ ಹಾಗೂ ಸೋಕೋ (SOCO) ತಜ್ಞರ ತಂಡ ಸೀಜ್ ಆಗಿದ್ದ ಕಚೇರಿಯನ್ನು ಪುನಃ ಓಪನ್ ಮಾಡಿ ಇಂಚಿಂಚೂ ಶೋಧ ಕಾರ್ಯ ನಡೆಸುತ್ತಿದೆ.

ಕಚೇರಿಯಲ್ಲಿರುವ ಲ್ಯಾಪ್ಟಾಪ್, ಕಂಪ್ಯೂಟರ್ ಹಾಗೂ ಪ್ರಮುಖ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದ್ದು, ಸಂಜೆಯವರೆಗೆ ಪಂಚನಾಮೆ ನಡೆಸಿ ಪೆನ್ ಡ್ರೈವ್ ಸೇರಿದಂತೆ ಎಲ್ಲಾ ಡಿಜಿಟಲ್ ಸಾಕ್ಷ್ಯಗಳನ್ನು ಜಪ್ತಿ ಮಾಡಲಾಗುವುದು. ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಬಾಲರಾಜ್ ಮಾನೆ ಸೇರಿದಂತೆ ಆರು ಜನರ ವಿರುದ್ಧ ಸದ್ಯ ಕೇಸ್ ದಾಖಲಾಗಿದ್ದು, ಈ ಹಗರಣದ ವ್ಯಾಪ್ತಿ ದೊಡ್ಡದಾಗಿರುವುದರಿಂದ ಇತ್ತೀಚಿನ ಶಿವಾನಂದ ನೀಲಣ್ಣವರ್ ವಂಚನೆ ಪ್ರಕರಣದ ಮಾದರಿಯಲ್ಲೇ ಇದನ್ನು ಕೂಡ ಸಿಐಡಿ ತನಿಖೆಗೆ ಹಸ್ತಾಂತರಿಸುವ ಸಾಧ್ಯತೆ ದಟ್ಟವಾಗಿದೆ.
