ರಾಜ್ಯದ ಜನರ ಒಳಿತಿಗಾಗಿ ಎಲ್ಲರೂ ಸೇರಿ ಒಟ್ಟಾಗಿ ಕೆಲಸ ಮಾಡೋಣ. ರಾಜಕಾರಣ ಮಾಡುವುದು ಬೇಡ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಲಹೆ ನೀಡಿದ್ದಾರೆ.

ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ 44ನೇ ಪುಣ್ಯಸರಣೆ ಅಂಗವಾಗಿ ವಿಧಾನಸೌಧದ ಆವರಣದಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಡಿ.ಕೆ.ಶಿವಕುಮಾರ್ ಮಾಧ್ಯಮಗಾರರೊಂದಿಗೆ ಮಾತನಾಡಿದರು. ಅರಸು ಅವರ ಕೆಲಸಗಳು 100 ವರ್ಷಗಳಾದರೂ ನಮ ನಡುವೆ ಚಿರಸ್ಥಾಯಿಯಾಗಿರುತ್ತವೆ. ಅವರ ಸೇವೆ ಮತ್ತು ಸಾಕ್ಷಿಗುಡ್ಡೆ ನಮ ಮುಂದಿದೆ. ಇಂದಿರಾಗಾಂಧಿ ಅವರ ಮಾರ್ಗದರ್ಶನದಲ್ಲಿ ಅರಸು ಅವರ ನಾಯಕತ್ವದಲ್ಲಿ ಊಳುವವನೇ ಭೂಮಿ ಒಡೆಯ ಕಾಯ್ದೆ ದೇಶಕ್ಕೆ ಮಾದರಿಯೆಂಬಂತೆ ಕರ್ನಾಟಕದಲ್ಲಿ ಅನುಷ್ಠಾನಕ್ಕೆ ಬಂದಿದೆ ಎಂದು ಹೇಳಿದರು. ಅರಸು ಅವರ ಮಾರ್ಗದರ್ಶನದಲ್ಲಿ ಅವರ ಆಶಯಗಳಂತೆ ನಮ ಸರ್ಕಾರ ಕೆಲಸ ಮುಂದುವರೆಸಲಿದೆ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತದಿಂದ ಜನ ಸಂಕಷ್ಟಕ್ಕೊಳಗಾಗಿದ್ದಾರೆ ಎಂದು ಪ್ರಧಾನಿ ನಿನ್ನೆ ಟೀಕಿಸಿದ್ದರು. ಇದಕ್ಕೆ ಇಂದು ತಾಳೆಯಿಂದಲೇ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಅವರು, ಪ್ರಧಾನಿಯವರು ತಾವು ಮುಖ್ಯಮಂತ್ರಿಯಾದಾಗ ಅಭಿನಂದಿಸಿದ್ದಾರೆ, ನಾನು ಅದಕ್ಕೆ ಧನ್ಯವಾದ ಹೇಳಿದ್ದೇನೆ. ಮುಂದಿನ ದಿನಗಳಲ್ಲಿ ಅವರನ್ನು ಗೌರವಯುತವಾಗಿ ಭೇಟಿ ಮಾಡುತ್ತೇನೆ. ಅವರೂ ರಾಜಕಾರಣ ಮಾಡುವುದು ಬೇಡ, ನಾವೂ ರಾಜಕಾರಣ ಮಾಡುವುದಿಲ್ಲ. ರಾಜ್ಯದ ಜನರ ಒಳಿತಿಗಾಗಿ ಒಟ್ಟಾಗಿ ಕೆಲಸ ಮಾಡೋಣ ಎಂದು ಹೇಳಿದರು.
ಸಚಿವ ರಾಮಲಿಂಗಾರೆಡ್ಡಿ ನನ್ನ ಸ್ನೇಹಿತರು, ಅವರ ಜೊತೆ ಚರ್ಚೆ ಮಾಡಿದ್ದೇನೆ. ವಾಟ್ಸಾಪ್‌ನಲ್ಲಿ ರಾಜೀನಾಮೆ ಕಳುಹಿಸಿದ್ದರು. ಈಗ ಅದು ಇತ್ಯರ್ಥವಾಗಿದೆ ಎಂದಿದ್ದಾರೆ. ದೇವರಾಜ ಅರಸು ಅವರು, ಅರಸು ಮನೆತನಕ್ಕೆ ಸೇರಿದ್ದರೂ ಕೂಡ ವಿವಿಧ ಜಾತಿಗಳಲ್ಲಿನ ನಾಯಕರನ್ನು ಬೆಳೆಸಿದ್ದಾರೆ. ಬೆಂಗಳೂರಿನಲ್ಲಿ ಎಲೆಕ್ಟ್ರಾನಿಕ್ ಸಿಟಿ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದು, ದೇವರಾಜ ಅರಸು ಅವರು. ವೀರಪ್ಪಮೊಯ್ಲಿ, ಎಸ್.ಎಂ.ಕೃಷ್ಣ ಆಗ ಸಚಿವರಾಗಿದ್ದರು ಎಂದು ಹೇಳಿದರು.
