Uncategorized

ಹೆಸರಿಗಷ್ಟೇ ಆದರ್ಶ ಶಾಲೆ: ಆರಂಭದ ಎರಡನೇ ದಿನವೇ ನೀರಿಗಾಗಿ ಮಕ್ಕಳ ಹಾಹಾಕಾರ, ಶೌಚಾಲಯಕ್ಕೂ ಬಿತ್ತು ಬೀಗ!

Share

ರಾಜ್ಯಾದ್ಯಂತ ಶಾಲೆಗಳು ಅದ್ಧೂರಿಯಾಗಿ ಆರಂಭಗೊಂಡ ಬೆನ್ನಲ್ಲೇ, ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಲೋಕಾಪುರ ಆದರ್ಶ ಶಾಲೆಯ ಮಕ್ಕಳ ಗೋಳು ಮಾತ್ರ ಹೇಳತೀರದಾಗಿದೆ. ಶಾಲೆ ಆರಂಭಗೊಂಡ ಎರಡನೇ ದಿನವೇ ವಿದ್ಯಾರ್ಥಿಗಳಿಗೆ ತೀವ್ರ ನೀರಿನ ಸಮಸ್ಯೆ ಎದುರಾಗಿದ್ದು, ಕುಡಿಯಲು ಮತ್ತು ಬಿಸಿಯೂಟದ ತಟ್ಟೆ ತೊಳೆಯಲು ನೀರಿಲ್ಲದೆ ಪರದಾಡುವಂತಾಗಿದೆ.

ಹೌದು.. ಶಾಲೆ ಆರಂಭದ ದಿನದಂದು ವಿದ್ಯಾರ್ಥಿಗಳಿಗೆ ಹೂಗುಚ್ಛ ನೀಡಿ, ಅದ್ಧೂರಿಯಾಗಿ ಸ್ವಾಗತಿಸಿದ್ದ ಶಿಕ್ಷಕರು ಮತ್ತು ಶಾಲಾ ಆಡಳಿತ ಮಂಡಳಿಯ ಅಸಲಿ ಬಣ್ಣ ಎರಡನೇ ದಿನವೇ ಬಯಲಾಗಿದೆ. ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಲೋಕಾಪುರ ಆದರ್ಶ ಶಾಲೆಯಲ್ಲಿ ನೀರಿಗಾಗಿ ಮಕ್ಕಳ ಹಾಹಾಕಾರ ಶುರುವಾಗಿದೆ. ಹೆಸರಿಗೆ ಮಾತ್ರ ಇದು ಆದರ್ಶ ಶಾಲೆ, ಆದರೆ ಇಲ್ಲಿ ಕನಿಷ್ಠ ಕುಡಿಯುವ ನೀರಿನ ಸೌಲಭ್ಯವೂ ಇಲ್ಲದಂತಾಗಿದೆ. ಬಿಸಿಯೂಟ ಸವಿದ ಬಳಿಕ ತಟ್ಟೆ ತೊಳೆಯಲು ಮತ್ತು ಕೈ ತೊಳೆಯಲು ನೀರಿಲ್ಲದೆ, ಪುಟ್ಟ ಪುಟ್ಟ ಮಕ್ಕಳು ಪಕ್ಕದಲ್ಲೇ ಇರುವ ಕೆಇಬಿ ಕಚೇರಿಯ ಆವರಣಕ್ಕೆ ಅಲೆಯುವಂತಾಗಿದೆ. ಶಾಲಾ ಆಡಳಿತ ಮಂಡಳಿಯ ಈ ಬೇಜವಾಬ್ದಾರಿತನಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಇನ್ನು ಶಾಲೆಯಲ್ಲಿ ಸುಸಜ್ಜಿತ ಶೌಚಾಲಯ ವ್ಯವಸ್ಥೆ ಇದ್ದರೂ ಸಹ ಅದಕ್ಕೆ ಬೀಗ ಜಡಿಯಲಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಅನಿವಾರ್ಯವಾಗಿ ಶೌಚಕ್ಕಾಗಿ ಬಯಲು ಪ್ರದೇಶವನ್ನು ಆಶ್ರಯಿಸುವಂತಾಗಿದೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಆದರ್ಶ ಶಾಲೆಯ ಆಡಳಿತ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ. ಸದ್ಯ ಆದರ್ಶ ಶಾಲೆಯ ಮಕ್ಕಳು ನೀರಿಗಾಗಿ ಪರದಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ತಕ್ಷಣವೇ ಗಮನಹರಿಸಿ ಈ ಆದರ್ಶ ಶಾಲೆಯ ದಯನೀಯ ಸ್ಥಿತಿಯನ್ನು ಸರಿಪಡಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Tags:

error: Content is protected !!