ಆದಿತ್ಯರಾಜ್ ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಪ್ರಕರಣ ದಾಖಲಾಗಿರುವ ಹಿನ್ನೆಲೆ ನಗರದ ಭಾಗ್ಯನಗರದಲ್ಲಿರುವ ಕಂಪನಿ ಕಚೇರಿ ಬಳಿ ಶುಕ್ರವಾರ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು.

ಮಾಹಿತಿ ಸಂಗ್ರಹಿಸಲು ತೆರಳಿದ್ದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಕಂಪನಿ ಸಿಬ್ಬಂದಿ ಗೂಂಡಾವರ್ತನೆ ನಡೆಸಿದ ಆರೋಪ ಕೇಳಿಬಂದಿದೆ. ಮಹಿಳಾ ಸಿಬ್ಬಂದಿ ಹಾಗೂ ಸೆಕ್ಯೂರಿಟಿ ಗಾರ್ಡ್‌ಗಳು ಮಾಧ್ಯಮದವರ ಮೇಲೆ ಹಲ್ಲೆಗೆ ಯತ್ನಿಸಿದ್ದು, ಕೆಲವರು ಗುಂಪು ಕಟ್ಟಿಕೊಂಡು ನಿಂದನೆ ನಡೆಸಿದ್ದಾರೆ ಎನ್ನಲಾಗಿದೆ.

ಇದೇ ವೇಳೆ ಕೆಲ ಪುರುಷ ಸಿಬ್ಬಂದಿಯೂ ಮಾಧ್ಯಮ ಪ್ರತಿನಿಧಿಗಳೊಂದಿಗೆ ವಾಗ್ವಾದ ನಡೆಸಿ ಹಲ್ಲೆಗೆ ಮುಂದಾದ ಆರೋಪ ಕೇಳಿಬಂದಿದೆ. ಕಂಪನಿ ಮಾಲೀಕ ಬಾಲರಾಜ್ ಮಾನೆ ಪರವಾಗಿ ಸಿಬ್ಬಂದಿ ಬ್ಯಾಟಿಂಗ್ ನಡೆಸಿದ್ದು, ಉದ್ದೇಶಪೂರ್ವಕವಾಗಿ ದಾಳಿ ಮಾಡಲು ಯತ್ನಿಸಲಾಗಿದೆ ಎಂದು ಮಾಧ್ಯಮದವರು ಆರೋಪಿಸಿದ್ದಾರೆ.
ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಉದ್ವಿಗ್ನತೆಯನ್ನು ಶಮನಗೊಳಿಸಿದರು.
ಇನ್ನು ಆದಿತ್ಯರಾಜ್ ಕ್ಯಾಪಿಟಲ್ ಸಿಬ್ಬಂದಿಯ ವರ್ತನೆಯನ್ನು ಖಂಡಿಸಿ ಮಾಧ್ಯಮ ಪ್ರತಿನಿಧಿಗಳು ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಹಿನ್ನೆಲೆ ಸ್ಥಳಕ್ಕೆ ಕಮಿಷ್ನರ್ ಭೂಷಣ್ ಬೋರಸೆ, ಡಿಸಿಪಿ ನಾರಾಯಣ್ ಬರಮನಿ ಅವರು ಭೇಟಿ ನೀಡಿದರು. ಈ ವೇಳೆ ಆಕ್ರೋಶ ವ್ಯಕ್ತಪಡಿಸಿದ ಮಾಧ್ಯಮ ಪ್ರತಿನಿಧಿಗಳು ಹಲ್ಲೆಗೆ ಮುಂದಾದ ಆದಿತ್ಯರಾಜ್ ಕ್ಯಾಪಿಟಲ್ ಸಂಸ್ಥೆಯ ಸಿಬ್ಬಂದಿಗಳ ಮೇಲೆ ರೌಡಿಶೀಟರ್ ಕೇಸ್ ದಾಖಲಿಸುವಂತೆ ಒತ್ತಾಯಿಸಿದರು.
