ಬೆಳಗಾವಿ ಜಿಲ್ಲೆಯಲ್ಲಿ ಅಪರಾಧ ಮುಕ್ತ ವಾತಾವರಣ ನಿರ್ಮಿಸಲು ಪೊಲೀಸರು ಭರ್ಜರಿ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಕಳೆದ 24 ಗಂಟೆಗಳಲ್ಲಿ ಸಿಸಿಬಿ ಮತ್ತು ಮಾರ್ಕೆಟ್ ಠಾಣೆ ಪೊಲೀಸರು ಪ್ರತ್ಯೇಕ ದಾಳಿಗಳನ್ನು ನಡೆಸಿ, ಲಕ್ಷಾಂತರ ರೂಪಾಯಿ ಮೌಲ್ಯದ ಗಾಂಜಾ ಹಾಗೂ ಕಾನೂನು ಬಾಹಿರ ಮಾರಕಾಸ್ತ್ರಗಳೊಂದಿಗೆ ಸಂಚರಿಸುತ್ತಿದ್ದ ಮೂವರು ಆರೋಪಿಗಳನ್ನು ಹೆಡೆಮುರಿಕಟ್ಟಿದ್ದಾರೆ.

ಬೆಳಗಾವಿಯ ನಗರ ಅಪರಾಧ ವಿಭಾಗ (CCB) ಮತ್ತು ಮಾರ್ಕೆಟ್ ಠಾಣೆಯ ಆ್ಯಂಟಿ ಸ್ಟ್ರೀಟಿಂಗ್ ಸ್ಕ್ವಾಡ್ ತಂಡಗಳು ಜಿಲ್ಲೆಯ ವಿವಿಧೆಡೆ ನಡೆಸಿದ ಕಾರ್ಯಾಚರಣೆಯಲ್ಲಿ ಮೂವರನ್ನು ಬಂಧಿಸಿ, ಲಕ್ಷಾಂತರ ಮೌಲ್ಯದ ಮಾಲನ್ನು ವಶಪಡಿಸಿಕೊಂಡಿವೆ. ಸಿಸಿಬಿ ಪಿಐ ಮಂಜುನಾಥ ನಾಯಿಕ ಹಾಗೂ ಪಿಎಸ್‌ಐ ಮಂಜುನಾಥ ಭಜಂತ್ರಿ ನೇತೃತ್ವದ ತಂಡವು ಗೋಕಾಕ-ಬೆಳಗಾವಿ ರಸ್ತೆಯ ಕರೀಕಟ್ಟಿ ಕ್ರಾಸ್ ಬಳಿ ದಾಳಿ ನಡೆಸಿ, ಹುಕ್ಕೇರಿಯ ಮೃತ್ಯುಂಜಯ ಭೀಮನಪ್ಪ ಜಡಗಿ (19) ಎಂಬಾತನನ್ನು ಬಂಧಿಸಿದೆ. ಆತನಿಂದ 1.50 ಲಕ್ಷ ರೂ. ಮೌಲ್ಯದ 3 ಕೆಜಿ ಗಾಂಜಾ, ಪ್ಲಾಟಿನಾ ಬೈಕ್ ಹಾಗೂ ವಿವೋ ಮೊಬೈಲ್ ಸೇರಿದಂತೆ ಒಟ್ಟು 1,85,000 ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದ್ದು, ಮಾರಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮತ್ತೊಂದು ಕಾರ್ಯಾಚರಣೆಯಲ್ಲಿ ಮಾರ್ಕೆಟ್ ಠಾಣೆಯ ಪಿಎಸ್‌ಐ ಮಣಿಕಂಠ ಪೂಜಾರಿ ಮತ್ತು ಪಿಎಸ್‌ಐ ರುಕ್ಕಿಣಿ ಅವರ ತಂಡವು ಜೀಜಾಮಾತಾ ಸರ್ಕಲ್ ಹಾಗೂ ಹಳೇ ಬಾಜಿ ಮಾರ್ಕೆಟ್ ಬಳಿ ದಾಳಿ ನಡೆಸಿ, ಕಾರುಗಳಲ್ಲಿ ಡ್ರಾಗನ್ ಚಾಕು ಹಾಗೂ ಜಂಬೆ (ಕುಕ್ಕರಿ) ಇಟ್ಟುಕೊಂಡು ಅಪರಾಧ ಕೃತ್ಯಕ್ಕೆ ಹೊಂಚು ಹಾಕುತ್ತಿದ್ದ ಸರ್ವೇಶ ಅಜೀತ ಕಂಗ್ರಾಳಕರ (26) ಮತ್ತು ಪ್ರೇಮ ಬಾಳು ಚೌಗಲೆ (31) ಎಂಬಿಬ್ಬರನ್ನು ಬಂಧಿಸಿ, ಎರಡು ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ.

