ಸೋಂದಾ ಶ್ರೀಗಳ ಸಾನಿಧ್ಯದಲ್ಲಿ ಭಕ್ತರ ಸೌಲಭ್ಯಕ್ಕೆ ಮುಕ್ತಿ

ಮೀನಾಕ್ಷಿ ಪಾಟೀಲ್ ಅವರಿಗೆ ಸರ್ವೋತ್ತಮ ಶ್ರಾವಿಕಾ ಪ್ರಶಸ್ತಿ

ಕೋಟಿ ವೆಚ್ಚದ ಸಭಾಭವನ ಯಾತ್ರಿ ನಿವಾಸ ಲೋಕಾರ್ಪಣೆ
ಸುಮಾರು ೪೦೦ ವರ್ಷಗಳ ಇತಿಹಾಸ ಹೊಂದಿರುವ ಹಾಗೂ ಕರ್ನಾಟಕ–ಮಹಾರಾಷ್ಟ್ರ ಗಡಿ ಭಾಗದ ಲಕ್ಷಾಂತರ ಭಕ್ತರ ಶ್ರದ್ಧಾಸ್ಥಾನವಾಗಿರುವ ಉಗಾರದ ಶ್ರೀ ಪದ್ಮಾವತಿ ದೇವಿ ಮಂದಿರದಲ್ಲಿ ೧೩ನೇ ಆರಾಧನಾ ಮಹೋತ್ಸವವು ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿಗಳ ಸಾನಿಧ್ಯದಲ್ಲಿ ಭಕ್ತಿಭಾವದಿಂದ ಜರುಗುತ್ತಿದೆ.
ಭಕ್ತರ ಸೌಲಭ್ಯಕ್ಕಾಗಿ ಸುಮಾರು ೧.೫೦ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ವಿಶಾಲ ಸಭಾಭವನ ಹಾಗೂ ಯಾತ್ರಿ ನಿವಾಸ ಕಟ್ಟಡಗಳ ಉದ್ಘಾಟನೆ ನೆರವೇರಿಸಿ ಭಕ್ತರಿಗೆ ಸಮರ್ಪಿಸಲಾಯಿತು. ಈ ಸಂದರ್ಭದಲ್ಲಿ ಸೋಂದಾ ಜೈನ ಮಠದ ಜಗದ್ಗುರು ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿಗಳು ಆಶೀರ್ವಚನ ನೀಡಿ, ದೇವಿಯ ಮಹಾತ್ಮೆ ದೇಶದಾದ್ಯಂತ ಪ್ರಸರಣವಾಗಲಿ ಎಂದು ಸಂದೇಶ ನೀಡಿದರು.
ಮಂಗಳವಾರ ದಿನಾಂಕ ೫ ರಿಂದ ಶುಕ್ರವಾರ ದಿನಾಂಕ ೮ರವರೆಗೆ ನಡೆಯುತ್ತಿರುವ ಮಹೋತ್ಸವದ ಅಂಗವಾಗಿ ಬುಧವಾರ ಸ್ವಾಮೀಜಿಗಳು ಶ್ರೀ ಪದ್ಮಾವತಿ ದೇವಿಯ ಮಹಾತ್ಮೆಯ ಕುರಿತು ಪ್ರವಚನ ನೀಡಿದರು. ಮಂಗಳವಾರ ಸಂಜೆ ಬೆಳಗಾವಿಯ ಶಾಸಕ ಅಭಯ್ ಪಾಟೀಲ್, ಮಾಜಿ ಶಾಸಕ ಸಂಜಯ್ ಪಾಟೀಲ್, ಮೋಹನರಾವ್ ಶಹಾ, ಕಲ್ಲಪ್ಪಣ್ಣಾ ಮಗೆಣ್ಣವರ್, ಮಹಾವೀರ ನೀಲಜಗಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿ, ಕ್ಷೇತ್ರದ ಅಭಿವೃದ್ಧಿಗೆ ಮಂದಿರದ ಮುಖ್ಯಸ್ಥ ಶೀತಲಗೌಡ ಪಾಟೀಲ್ ಹಾಗೂ ಅವರ ತಂಡ ಕೈಗೊಂಡ ಕಾರ್ಯಗಳನ್ನು ಶ್ಲಾಘಿಸಿದರು.
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಡಾ. ಸರಿತಾ ಎಂ.ಕೆ. ಜೈನ್ ಹಾಗೂ ಭಾರತವರ್ಷೀಯ ಜೈನ ಮಹಿಳಾ ಮಹಾಸಭಾ ವತಿಯಿಂದ ಆಯೋಜಿಸಲಾದ ಸಮಾರಂಭದಲ್ಲಿ, ೧೦೮ ಶ್ರೀ ಪ್ರಜ್ಞ ಸಾಗರ ಮುನಿಗಳ ಉಪಸ್ಥಿತಿಯಲ್ಲಿ ದಕ್ಷಿಣ ಭಾರತ ಜೈನ ಸಭೆಯ ಮಾಜಿ ಅಧ್ಯಕ್ಷ ದಿವಂಗತ ರಾವಸಾಹೇಬ್ ಪಾಟೀಲ್ ಅವರ ಧರ್ಮಪತ್ನಿ ಶ್ರೀಮತಿ ಮೀನಾಕ್ಷಿ ಪಾಟೀಲ್ ಅವರಿಗೆ ‘ಸರ್ವೋತ್ತಮ ಶ್ರಾವಿಕಾ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಅವರನ್ನು ಹಾಗೂ ಅವರ ಕುಟುಂಬಸ್ಥರನ್ನು ಮತ್ತು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರ ಕುಟುಂಬವನ್ನು ಪದ್ಮಾವತಿ ಆದರ್ಶ ಮಹಿಳಾ ಮಂಡಳದ ಸದಸ್ಯರು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಡಾ. ಮಹಾವೀರ್ ದಾನಿಗೊಂಡ, ಭರಮಪ್ಪಾ ಚೌಗುಲೆ, ಬಾಹುಬಲಿ ನಾಗನೂರ, ಭರತೇಶ್ ಬನವಣೆ, ಜಯಕುಮಾರ್ ಖೋತ, ಮಹಾವೀರ ಕಾತ್ರಾಳೆ, ಸಂಜಯ ನಾಡಗೌಡ್, ನ್ಯಾಯವಾದಿಗಳಾದ ಸಂಜಯ ಕುಚನೂರೆ, ಎಮ್.ಎಚ್. ನಂದಗಾಂವ, ಮಹೇಂದ್ರ ಖೇಮಲಾಪುರೆ, ಡಾ. ನೀರಜಾ ನಾಗೇಂದ್ರಕುಮಾರ್, ಬಮ್ಮಣ್ಣಾ ಚೌಗುಲೆ, ವರ್ಧಮಾನ್ ಕೋರಿ, ಪ್ರವೀಣ ನಾಡಗೌಡ, ಪ್ರದೀಪ್ ಚಿಂಚವಾಡೆ, ಆದಿನಾಥ ವಸವಾಡೆ, ವೀಣಾ ಪಟ್ಟಣಕೊಡಿ ಸೇರಿದಂತೆ ಜೈನ ಸಮಾಜದ ಅನೇಕ ಮುಖಂಡರು ಉಪಸ್ಥಿತರಿದ್ದರು.
