• ಉಗಾರದಲ್ಲಿ 13ನೇ ಪದ್ಮಾವತಿ ಆರಾಧನಾ ಮಹೋತ್ಸವ
• ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳಿಂದ ಶಾಂತಿ ಸಂದೇಶ
• ಭವ್ಯ ರಥದ ಮೂಲಕ ಸ್ವಾಮೀಜಿಗಳ ಶೋಭಾಯಾತ್ರೆ
• ವಿಶ್ವಕಲ್ಯಾಣಕ್ಕಾಗಿ 108 ಹೋಮಗಳ ಪೂರ್ಣಾಹುತಿ

ವಿಶ್ವಕ್ಕೆ ಶಾಂತಿ, ಅಹಿಂಸೆ ಹಾಗೂ ಸಹಬಾಳ್ವೆಯ ಸಂದೇಶ ಸಾರುತ್ತಿರುವ ಜೈನ ಧರ್ಮವು, ಪ್ರತಿದಿನದ ಪೂಜಾ ವಿಧಿವಿಧಾನಗಳಲ್ಲಿ ವಿಶ್ವಕಲ್ಯಾಣಕ್ಕಾಗಿ ಪ್ರಾರ್ಥನೆ ಸಲ್ಲಿಸುವ ಮೂಲಕ ಮಾನವಕುಲಕ್ಕೆ ಅಪಾರ ಕೊಡುಗೆ ನೀಡಿದೆ ಎಂದು ಶ್ರವಣಬೆಳಗೊಳ ಜೈನ ಕಾಶಿಯ ಪೀಠಾಧೀಶರಾದ ಪ.ಪೂ. ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳು ಹೇಳಿದರು.
ಉಗಾರದ ಅತಿಶಯ ಕ್ಷೇತ್ರ ಶ್ರೀ ಪದ್ಮಾವತಿ ದೇವಿ ಮಂದಿರದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ನಡೆದ 13ನೇ ಆರಾಧನಾ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ಜೈನ ಧರ್ಮದ ಅಹಿಂಸೆ, ಸತ್ಯ, ತ್ಯಾಗ ಹಾಗೂ ಮಾನವೀಯ ಮೌಲ್ಯಗಳು ವಿಶ್ವಶಾಂತಿಗೆ ದಾರಿದೀಪವಾಗಿವೆ ಎಂದರು.
ಸೋಂದಾ ಜೈನ ಮಠದ ಜಗದ್ಗುರು ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿಗಳು ಮಾತನಾಡಿ, ವಿಶ್ವಶಾಂತಿಗಾಗಿ ಆಯೋಜಿಸಿದ ಈ ಆರಾಧನಾ ಮಹೋತ್ಸವದಲ್ಲಿ ನೂರಾರು ಶ್ರಾವಕ-ಶ್ರಾವಿಕೆಯರು ಸಂಕಲ್ಪ ಮಾಡಿ ಪೂಜಾ ವಿಧಿವಿಧಾನಗಳಲ್ಲಿ ಭಾಗವಹಿಸಿರುವುದು ಸಂತಸದ ವಿಷಯವಾಗಿದೆ. ಇಂದಿನ ಸಮಾಜದಲ್ಲಿ ಹೆಚ್ಚುತ್ತಿರುವ ಹಿಂಸೆ ಹಾಗೂ ಅಸಹಿಷ್ಣುತೆಯ ನಡುವೆ ಪ್ರತಿಯೊಬ್ಬರೂ ಜೈನ ಧರ್ಮದ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ರಾಜಸ್ಥಾನದ ತಿಜಾರಾ ಜೈನ ಮಠದ ಸ್ವಸ್ತಿ ಶ್ರೀ ಸೌರಭಸೇನ ಭಟ್ಟಾರಕ ಸ್ವಾಮೀಜಿಗಳು ಆಶೀರ್ವಚನ ನೀಡುತ್ತಾ, ಸುಮಾರು 400 ವರ್ಷಗಳ ಇತಿಹಾಸ ಹೊಂದಿರುವ ಉಗಾರದ ಶ್ರೀ ಪದ್ಮಾವತಿ ದೇವಿ ಮಂದಿರವು ಅತಿಶಯ ಕ್ಷೇತ್ರವಾಗಿದ್ದು, ಅನೇಕ ಭಕ್ತರ ಹರಕೆಗಳನ್ನು ಈಡೇರಿಸಿರುವ ಪವಿತ್ರ ಕ್ಷೇತ್ರವಾಗಿದೆ. ಉಗಾರ ಬುದ್ರುಕ್ ಗ್ರಾಮದಲ್ಲಿ ಕೇವಲ ಜೈನ ಸಮಾಜದವರಷ್ಟೇ ಅಲ್ಲದೆ, ಇತರ ಧರ್ಮದ ಜನರು ಸಹ ಈ ಕ್ಷೇತ್ರದ ಪಾವಿತ್ರ್ಯ ಕಾಪಾಡಿಕೊಂಡು, ಮದ್ಯಪಾನ ಹಾಗೂ ಮಾಂಸಾಹಾರದಿಂದ ದೂರವಿದ್ದು ದೇವಿಯ ಮಹಾತ್ಮೆಯನ್ನು ಗೌರವಿಸುತ್ತಿದ್ದಾರೆ. ಯುವಕರು ವ್ಯಸನಮುಕ್ತ ಜೀವನ ನಡೆಸಿ ಧರ್ಮ ಮತ್ತು ಸಂಸ್ಕೃತಿಯನ್ನು ಉಳಿಸಬೇಕು ಎಂದು ಸಂದೇಶ ನೀಡಿದರು.
ಕಂಬದಹಳ್ಳಿ ಜೈನ ಮಠದ ಭುವನಕೀರ್ತಿ ಮಹಾರಾಜರು ಮಾತನಾಡಿ, “ನೀನು ಬದುಕು, ಇತರರನ್ನೂ ಬದುಕಲು ಬಿಡು” ಎಂಬ ಜೈನ ಧರ್ಮದ ಮೂಲ ತತ್ವವನ್ನು ಪ್ರತಿಯೊಬ್ಬರೂ ಪಾಲಿಸಿದರೆ ಸಮಾಜದಲ್ಲಿ ಸುಖ, ಶಾಂತಿ ಹಾಗೂ ಸೌಹಾರ್ದತೆ ನೆಲೆಸಲಿದೆ ಎಂದರು.
ಉಗಾರದ ಪದ್ಮಾವತಿ ಮಂದಿರದ ಧರ್ಮದರ್ಶಿ ಶೀತಲ್ ಪಾಟೀಲ್ ಮಾತನಾಡಿ, ನಾಲ್ಕು ದಿನಗಳ ಮಹೋತ್ಸವದಲ್ಲಿ ಭಟ್ಟಾರಕ ಸ್ವಾಮೀಜಿಗಳು, ರಾಜಕೀಯ ಮುಖಂಡರು, ಶ್ರಾವಕ-ಶ್ರಾವಿಕೆಯರು ಹಾಗೂ ಪದ್ಮಾವತಿ ಸೇವಾ ಸಮಿತಿ ಸದಸ್ಯರು ಒಂದಾಗಿ ವಿಶ್ವಶಾಂತಿಗಾಗಿ ಪ್ರಾರ್ಥನೆ ಸಲ್ಲಿಸಿದ್ದೇವೆ. ಮುಂದಿನ ವರ್ಷ ಉತ್ತಮ ಮಳೆ-ಬೆಳೆ ಹಾಗೂ ಸಮೃದ್ಧಿ ದೊರೆಯಲೆಂದು ದೇವಿಯಲ್ಲಿ ಪ್ರಾರ್ಥಿಸಲಾಗಿದೆ ಎಂದರು.
ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳು ಉಗಾರಕ್ಕೆ ಪ್ರಥಮ ಬಾರಿಗೆ ಆಗಮಿಸಿದ್ದರಿಂದ, ಅವರ ಪುರಪ್ರವೇಶದ ನಿಮಿತ್ತ ಗ್ರಾಮದ ಪ್ರಮುಖ ಮಾರ್ಗಗಳಲ್ಲಿ ಭವ್ಯ ರಥದ ಮೂಲಕ ಶೋಭಾಯಾತ್ರೆ ನಡೆಯಿತು. ಮಹೋತ್ಸವದ ಅಂಗವಾಗಿ ಶ್ರೀ ಜಿನಾಭಿಷೇಕ, ಶ್ರೀ ಪದ್ಮಾವತಿ ವಿಧಾನ, ಮಹಾಪೂರ್ಣಾಹುತಿ, 108 ಹೋಮ ಪೂರ್ಣಾಹುತಿ, ಮಂಗಳಾರತಿ, ಪಾದಪೂಜೆ, ಅಭಿನಂದನಾ ಸಮಾರಂಭ, ಧ್ವಜಾವರೋಹಣ ಹಾಗೂ ಪೂಜಾ ವಿಸರ್ಜನೆ ಕಾರ್ಯಕ್ರಮಗಳು ಭಕ್ತಿಭಾವದಿಂದ ಜರುಗಿದವು.
