Dharwad

ಧಾರವಾಡ: ಯೋಗೀಶಗೌಡ ಕೇಸ್ – ವಿನಯ್ ಕುಲಕರ್ಣಿ ಅಪರಾಧಿ; ಆಕ್ರೋಶದ ನಡುವೆ ಬೆಂಬಲಿಗರಿಂದ ತೀವ್ರ ಪ್ರತಿಭಟನೆ!

Share

ಶಾಸಕ ವಿನಯ್ ಕುಲಕರ್ಣಿ ಈಗ ಅಪರಾಧಿ

ಧಾರವಾಡದ ಜ್ಯುಬಿಲಿ ವೃತ್ತದಲ್ಲಿ ಬೃಹತ್ ಪ್ರತಿಭಟನೆ

ವಿನಯ್ ಕುಲಕರ್ಣಿ ವಿರುದ್ಧ ರಾಜಕೀಯ ಷಡ್ಯಂತ್ರ

ತೀವ್ರ ಆಕ್ರೋಶ; ಬೆಂಬಲಿಗರು ಪೊಲೀಸರ ವಶಕ್ಕೆ

ಧಾರವಾಡದ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿ ಅವರು ಅಪರಾಧಿ ಎಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಬುಧವಾರ ಮಹತ್ವದ ತೀರ್ಪು ನೀಡಿದೆ. ನ್ಯಾಯಾಲಯದ ಈ ಆದೇಶ ಹೊರಬೀಳುತ್ತಿದ್ದಂತೆ ಧಾರವಾಡದಲ್ಲಿ ವಿನಯ್ ಕುಲಕರ್ಣಿ ಬೆಂಬಲಿಗರ ಆಕ್ರೋಶ ಕಟ್ಟೆಯೊಡೆದಿದೆ.

ತೀರ್ಪಿನ ಹಿನ್ನೆಲೆಯಲ್ಲಿ ಧಾರವಾಡದ ಜ್ಯುಬಿಲಿ ವೃತ್ತದಲ್ಲಿ ಜಮಾಯಿಸಿದ ವಿನಯ್ ಕುಲಕರ್ಣಿ ಅವರ ನೂರಾರು ಬೆಂಬಲಿಗರು ಬೃಹತ್ ಧರಣಿ ನಡೆಸಿದರು. “ವಿನಯ್ ಕುಲಕರ್ಣಿ ಅವರನ್ನು ವ್ಯವಸ್ಥಿತವಾಗಿ ಈ ಕೊಲೆ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಅವರನ್ನು ಅಪರಾಧಿಯನ್ನಾಗಿ ಮಾಡುವ ಹಿಂದೆ ದೊಡ್ಡ ಷಡ್ಯಂತ್ರವೇ ನಡೆದಿದೆ. ಈ ಪ್ರಕರಣದಲ್ಲಿ ಅವರನ್ನು ಹೇಗಾದರೂ ಮಾಡಿ ಸಿಲುಕಿಸಲೇಬೇಕು ಎಂದು ಮೊದಲೇ ಜಾಲ ಹೆಣೆಯಲಾಗಿತ್ತು,” ಎಂದು ಪ್ರತಿಭಟನಾಕಾರರು ಗಂಭೀರವಾಗಿ ಆರೋಪಿಸಿದರು.

ಪ್ರತಿಭಟನೆಯ ಸಂದರ್ಭದಲ್ಲಿ ವಿನಯ್ ಕುಲಕರ್ಣಿ ಪರ ಘೋಷಣೆಗಳನ್ನು ಕೂಗಿದ ಬೆಂಬಲಿಗರು, “ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಅಣತಿಯಂತೆ ಈ ಪಿತೂರಿ ನಡೆದಿದೆ,” ಎಂದು ಆಕ್ರೋಶ ಹೊರಹಾಕಿದರು. ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದುಕೊಂಡರು.

Tags:

error: Content is protected !!