Dharwad

ಧಾರವಾಡದ ಹೆಬ್ಬಳ್ಳಿ ಜಿ.ಪಂ. ಸದಸ್ಯ ಯೋಗೇಶಗೌಡ ಹತ್ಯೆ ಪ್ರಕರಣದ ತೀರ್ಪು ಪ್ರಕಟ ಹಿನ್ನೆಲೆ: “ಕಾನೂನು ಎಲ್ಲರಿಗೂ ಒಂದೇ, ನನಗೆ ಇನ್ನೂ ಭದ್ರತೆ ಬೇಕು” – ಎ1 ಆರೋಪಿ ಬಸವರಾಜ ಮುತ್ತಗಿ

Share

• ಯೋಗೇಶಗೌಡ ಕೊಲೆ ಪ್ರಕರಣದ ಅಂತಿಮ ತೀರ್ಪು.
• ಎ1 ಆರೋಪಿ ಬಸವರಾಜ ಮುತ್ತಗಿ ದೋಷಮುಕ್ತ.
• ಹದಿನೇಳು ಮಂದಿ ಆರೋಪಿಗಳು ಈಗ ಅಪರಾಧಿಗಳು.
• ನನಗೆ ಮತ್ತು ಕುಟುಂಬಕ್ಕೆ ಭದ್ರತೆ ನೀಡಿ.

ಧಾರವಾಡದ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶಗೌಡ ಗೌಡರ ಕೊಲೆ ಪ್ರಕರಣದ ತೀರ್ಪು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಇಂದು ಪ್ರಕಟಗೊಂಡಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಎ1 ಆರೋಪಿ ಬಸವರಾಜ ಮುತ್ತಗಿ ಪ್ರತಿಕ್ರಿಯಿಸಿದ್ದು, “ಕಾನೂನು ಎಲ್ಲರಿಗೂ ಒಂದೇ, ನನಗೆ ಹಾಗೂ ನನ್ನ ಕುಟುಂಬಕ್ಕೆ ಹೆಚ್ಚಿನ ಭದ್ರತೆ ಬೇಕು” ಎಂದು ಮನವಿ ಮಾಡಿದ್ದಾರೆ.
ಯೋಗೇಶಗೌಡ ಕೊಲೆ ಪ್ರಕರಣದ ತೀರ್ಪು ಪ್ರಕಟವಾದ ಬಳಿಕ ಬಸವರಾಜ ಮುತ್ತಗಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಈ ಹಿಂದೆ ಪೊಲೀಸರು ಸಲ್ಲಿಸಿದ್ದ ಚಾರ್ಜ್‌ಶೀಟ್‌ನಲ್ಲಿ ಮುತ್ತಗಿ ಎ1 ಆರೋಪಿಯಾಗಿದ್ದರು. ಆದರೆ, ತನಿಖೆಯ ಹಂತದಲ್ಲಿ ಅವರು ‘ಮಾಫಿ ಸಾಕ್ಷಿ’ಯಾಗಿದ್ದರಿಂದ (Approver), ಅವರನ್ನು ಆರೋಪಿಯನ್ನಾಗಿ ಪರಿಗಣಿಸಬಾರದು ಎಂದು ಸಿಬಿಐ ಮನವಿ ಮಾಡಿತ್ತು. ಇದನ್ನು ಪುರಸ್ಕರಿಸಿದ ನ್ಯಾಯಾಲಯವು ಮುತ್ತಗಿ ಅವರನ್ನು ಹೊರತುಪಡಿಸಿ, ಬಾಕಿ 17 ಜನರನ್ನು ಅಪರಾಧಿಗಳೆಂದು ಘೋಷಿಸಿದೆ.
ಧಾರವಾಡದಲ್ಲಿ ಈ ಬಗ್ಗೆ ಮಾತನಾಡಿದ ಬಸವರಾಜ ಮುತ್ತಗಿ, “ಕಾನೂನು ಎಲ್ಲರಿಗೂ ಒಂದೇ ಎಂಬುದು ಇಂದು ಸಾಬೀತಾಗಿದೆ. ನಾನು ಅಂದು ಆ ತಪ್ಪು ಮಾಡಬಾರದಿತ್ತು, ಆ ಘಟನೆಯ ಬಗ್ಗೆ ನನಗೆ ತೀವ್ರ ಪಶ್ಚಾತಾಪವಿದೆ. ನನ್ನ ತಂದೆ-ತಾಯಿ ನನ್ನನ್ನು ನೋಡುವ ದೃಷ್ಟಿಕೋನವೇ ಬದಲಾಗಿತ್ತು. ಕಾಡಿದ ಪಾಪಪ್ರಜ್ಞೆಯಿಂದಲೇ ನಾನು ಸತ್ಯ ಹೇಳಲು ನಿರ್ಧರಿಸಿ ಸಾಕ್ಷಿಯಾದೆ. ಇಂದು ಸತ್ಯಕ್ಕೆ ಜಯ ಸಿಕ್ಕಿದೆ,” ಎಂದು ಭಾವುಕರಾದರು.
ಇದೇ ವೇಳೆ ಆತಂಕ ವ್ಯಕ್ತಪಡಿಸಿದ ಅವರು, “ತೀರ್ಪು ಪ್ರಕಟವಾದ ಬಳಿಕ ಬೆಂಗಳೂರಿನ ಕೋರ್ಟ್ ಆವರಣದಲ್ಲಿ ಕೆಲವರು ನನ್ನನ್ನು ಹಾಗೂ ಬಸವರಾಜ ಕೊರವರ ಅವರನ್ನು ಬಿಡುವುದಿಲ್ಲ ಎಂದು ಕೂಗಾಡುತ್ತಿದ್ದರು ಎಂಬ ವಿಷಯ ತಿಳಿಯಿತು. ಈ ಹಿನ್ನೆಲೆಯಲ್ಲಿ ನನಗೂ ಮತ್ತು ನನ್ನ ಕುಟುಂಬಕ್ಕೂ ಹೆಚ್ಚಿನ ಪೊಲೀಸ್ ಭದ್ರತೆ ನೀಡಬೇಕು. ನ್ಯಾಯಾಲಯದ ಇಂದಿನ ತೀರ್ಪಿನಿಂದ ನ್ಯಾಯಾಂಗದ ಮೇಲಿರುವ ಗೌರವ ಮತ್ತಷ್ಟು ಹೆಚ್ಚಾಗಿದೆ. ಯಾವುದೇ ಯುವಕರು ಯಾರನ್ನೋ ನಂಬಿ ಇಂತಹ ಕೊಲೆ ಕೇಸ್‌ಗಳಲ್ಲಿ ಭಾಗಿಯಾಗಿ ಜೀವನ ಹಾಳುಮಾಡಿಕೊಳ್ಳಬೇಡಿ,” ಎಂದು ಮನವಿ ಮಾಡಿಕೊಂಡರು.
ಬೈಟ್: ಬಸವರಾಜ ಮುತ್ತಗಿ (ಪೊಲೀಸ್ ಚಾರ್ಜ್‌ಶೀಟ್‌ನಲ್ಲಿ ಎ1 ಆರೋಪಿ).

Tags:

error: Content is protected !!