Bagalkot

ಜಮಖಂಡಿಯಲ್ಲಿ ಮಣ್ಣು ಮಾಫಿಯಾ ಅಟ್ಟಹಾಸ: ಕೃಷ್ಣಾ ನದಿ ತೀರದಲ್ಲಿ ರಾಜಾರೋಷವಾಗಿ ಲೂಟಿ!

Share

ಮುತ್ತೂರು ಗ್ರಾಮದಲ್ಲಿ ಮಣ್ಣು ಮಾಫಿಯಾ

ಪರ್ಮಿಷನ್ ಇಲ್ಲದೆ ಮಣ್ಣು ಸಾಗಾಟ

ಅಕ್ರಮಕ್ಕೆ ಅಧಿಕಾರಿಗಳ ಪರೋಕ್ಷ ಸಾಥ್?

ನದಿಯ ಭೂಸ್ವಾಧೀನ ಭೂಮಿ ಲೂಟಿ

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿ ಮಣ್ಣು ಮಾಫಿಯಾ ಹೆಡೆಗೆದರಿ ನಿಂತಿದೆ. ಯಾವುದೇ ಅನುಮತಿ ಇಲ್ಲದೆ, ಕೃಷ್ಣಾ ನದಿಯ ಭೂಸ್ವಾಧೀನವಾದ ಜಮೀನಿನಿಂದ ರಾಜಾರೋಷವಾಗಿ ಮಣ್ಣು ಸಾಗಾಟ ನಡೆಯುತ್ತಿದ್ದು, ದೂರು ನೀಡಿದರೂ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಮುತ್ತೂರು ಗ್ರಾಮದಲ್ಲಿ ಅಕ್ರಮ ಮಣ್ಣು ಮಾಫಿಯಾ ಅವ್ಯಾಹತವಾಗಿ ನಡೆಯುತ್ತಿದೆ. ಕೃಷ್ಣಾ ನದಿ ಪಕ್ಕದಲ್ಲಿರುವ ಭೂಸ್ವಾಧೀನವಾದ ಭೂಮಿಯಿಂದ ಜೆಸಿಬಿಗಳ ಮೂಲಕ ದಿನದ ಇಪ್ಪತ್ನಾಲ್ಕು ಗಂಟೆಯೂ ಮೊಹರಂ (ಮಣ್ಣು) ಎತ್ತಲಾಗುತ್ತಿದೆ. ಟಿಪ್ಪರ್ ಮತ್ತು ಟ್ರ್ಯಾಕ್ಟರ್‌ಗಳನ್ನು ಬಳಸಿ ಇಲ್ಲಿಂದ ಮಣ್ಣನ್ನು ಜಮಖಂಡಿ ಸುತ್ತಮುತ್ತಲಿನ ಇಟ್ಟಿಗೆ ಭಟ್ಟಿಗಳಿಗೆ ಕಾನೂನುಬಾಹಿರವಾಗಿ ಪೂರೈಕೆ ಮಾಡಲಾಗುತ್ತಿದೆ. ಸರ್ಕಾರದ ಆಸ್ತಿಯಾಗಿರುವ ಈ ಜಮೀನಿನಿಂದ ಮಣ್ಣು ಲೂಟಿಯಾಗುತ್ತಿದ್ದರೂ ತಡೆಯುವವರು ಯಾರೂ ಇಲ್ಲದಂತಾಗಿದೆ.

ಮಣ್ಣು ಮಾಫಿಯಾದ ಈ ಅಕ್ರಮದ ಬಗ್ಗೆ ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಸಹ, ಇದುವರೆಗೂ ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳ ಈ ಮೌನವು ಅವರೂ ಕೂಡ ಮಾಫಿಯಾ ಜೊತೆ ಕೈಜೋಡಿಸಿದ್ದಾರೆಯೇ ಎಂಬ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಪರ್ಮಿಷನ್ ಇಲ್ಲದೆ ಪಟ್ಟಾ ಜಮೀನು ಹಾಗೂ ನದಿ ತೀರದ ಮಣ್ಣು ಸಾಗಾಟದಿಂದ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿಗಳ ರಾಯಲ್ಟಿ ನಷ್ಟವಾಗುತ್ತಿದೆ. ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತು ಈ ಅಕ್ರಮ ದಂಧೆಗೆ ಬ್ರೇಕ್ ಹಾಕಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Tags:

error: Content is protected !!