ಚಿಕ್ಕೋಡಿ: ಚಿಕ್ಕೋಡಿ-ಮಿರಜ ಅಂತರ್ ರಾಜ್ಯ ರಸ್ತೆ ಮಾರ್ಗದ ಮಾಂಜರಿಯಿಂದ ಮಾಂಜರಿವಾಡಿ ಗ್ರಾಮದವರೆಗಿನ ಸುಮಾರು 4 ಕಿಮೀ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಶೀಘ್ರ ದುರಸ್ತಿ ಗೊಳಿಸುವಂತೆ ಗ್ರಾಮಸ್ಥರು ಹಾಗೂ ವಾಹನ ಚಾಲಕರು ಆಗ್ರಹಿಸಿದ್ದಾರೆ.

ರಸ್ತೆಯ ಮೇಲೆ ಎಲ್ಲಿ ನೋಡಿದರೂ ಗುಂಡಿಗಳಿದ್ದು ಸಂಚರಿಸುವುದೆ ಒಂದು ಕಷ್ಟದ ಕೆಲಸವಾಗಿದೆ ಎಂದು ಹೇಳಿ ವಾಹನ ಚಾಲಕರು ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ದಿನನಿತ್ಯ ಈ ರಸ್ತೆ ಮಾರ್ಗದ ಮೂಲಕ ಸಾವಿರಾರು ವಾಹನಗಳು ಸಾಗುತ್ತವೆ. ಇಲ್ಲಿಯ ಗುಂಡಿಗಳಿಂದ ಮೇಲಿಂದ ಮೇಲೆ ಅಪಘಾತಗಳು ಆಗುತ್ತಲೇ ಇವೆ. ರಾತ್ರಿಯ ವೇಳೆಯಲ್ಲಿ ಪ್ರಾಣ ಕೈಯಲ್ಲಿ ಹಿಡಿದುಕೊಂಡು ಪ್ರಯಾಣಿಸುವ ಸ್ಥಿತಿ ಎದುರಾಗಿದೆ. ವಾಹನ ಸವಾರರು ದಿನನಿತ್ಯ ನರಕಯಾತನೆ ಅನುಭವಿಸುತ್ತಿದ್ದು ರಸ್ತೆ ದುರುಸ್ತಿ ಯಾವಾಗ ಎಂದು ಪ್ರಶ್ನಿಸುತ್ತಿದ್ದಾರೆ.
ಕಳೆದ 2-3 ವರ್ಷಗಳಿಂದ ರಸ್ತೆ ಹದಗೆಟ್ಟಿದ್ದರೂ ಯಾರೂ ಇತ್ತ
ಗಮನಹರಿಸಿಲ್ಲಾ ಎಂಬ ಆರೋಪ ಗಂಭಿರವಾಗಿ ಕೇಳಿಬರುತ್ತಿದೆ. ಒಂದೆರಡು ಬಾರಿ ತಗ್ಗು ಬಿದ್ದ ಕಡೆಗಳಲ್ಲಿ ಮಣ್ಣು ಹಾಕಿದ್ದರು. ಆದರೆ ಕೆಲವೇ ದಿನಗಳಲ್ಲಿ ಕಿತ್ತು ಹೋಗಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ. ರಸ್ತೆ ಸಂಪೂರ್ಣವಾಗಿ ದುರ್ಲಕ್ಷೆಕ್ಕೆ ಒಳಗಾಗಿದ್ದು ಕೂಡಲೇ ಸಂಬಂಧಪಟ್ಟವರು ಇತ್ತ ಕಡೆಗೆ ಗಮನ ಹರಿಸಿ ಗುಂಡಿ ತುಂಬುವ ವ್ಯವಸ್ಥೆ ಮಾಡಿ ರಸ್ತೆ ದುರಸ್ತಿಗೊಳಿಸುವಂತೆ ಒತ್ತಾಯಿಸಿದ್ದಾರೆ.
