hukkeri

ಹಿರಣ್ಯಕೇಶಿ ನದಿಯಲ್ಲಿ ಮುಳುಗಿ ತಾಯಿ ಮಗು ಸಾವು. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಬಳಿ ಘಟನೆ.

Share

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರದಲ್ಲಿ ಇಂದು ಮನಕಲಕುವ ಘಟನೆಯೊಂದು ಸಂಭವಿಸಿದೆ. ಹರಿಯುವ ನದಿಯಲ್ಲಿ ಈಜಲು ಹೋದ ಮಗನನ್ನು ರಕ್ಷಿಸಲು ಹೋದ ತಾಯಿ, ಮಗನೊಂದಿಗೆ ತಾನೂ ಜಲಸಮಾಧಿಯಾದ ದುರಂತ ನಡೆದಿದೆ. ಸಂಕೇಶ್ವರದ ಹೊರವಲಯದ ಹಿರಣ್ಯಕೇಶಿ ನದಿಯಲ್ಲಿ ಈ ಘಟನೆ ಜರುಗಿದ್ದು, ಇಡೀ ಪಟ್ಟಣದಲ್ಲಿ ನೀರವ ಮೌನ ಆವರಿಸಿದೆ.

 ಸಂಕೇಶ್ವರ ಪಟ್ಟಣದ ನಿವಾಸಿಗಳಾದ 27 ವರ್ಷದ ಲಕ್ಷ್ಮಿ ಸುಧಾಕರ ಕುಟೋಳಿ ಹಾಗೂ ಅವರ 9 ವರ್ಷದ ಪುತ್ರ ಸುಪ್ರೀತ್ ಸುಧಾಕರ್ ಕುಟೋಳಿ ಮೃತಪಟ್ಟ ದುರ್ದೈವಿಗಳು. ಇಂದು ಮಧ್ಯಾಹ್ನ ಬಾಲಕ ಸುಪ್ರೀತ್ ಸಂಕೇಶ್ವರ ಹೊರವಲಯದ ಹಿರಣ್ಯಕೇಶಿ ನದಿಗೆ ಈಜಲು ಹೋಗಿದ್ದನು. ಆಟವಾಡುತ್ತಾ ನದಿಯ ಆಳಕ್ಕೆ ಹೋದ ಬಾಲಕ ಸುಪ್ರೀತ್ ನೀರಿನಲ್ಲಿ ಮುಳುಗಲು ಪ್ರಾರಂಭಿಸಿದ್ದಾನೆ.

ಇದನ್ನು ಕಂಡ ತಾಯಿ ಲಕ್ಷ್ಮಿ, ಮಗನ ಪ್ರಾಣ ಉಳಿಸಲು ತಕ್ಷಣವೇ ನದಿಗೆ ಧಾವಿಸಿದ್ದಾರೆ. ಆದರೆ ನೀರಿನ ರಭಸ ಹಾಗೂ ಆಳ ಹೆಚ್ಚಾಗಿದ್ದರಿಂದ ಮಗನನ್ನು ಉಳಿಸಿಕೊಳ್ಳಲಾಗದೆ, ತಾಯಿ ಲಕ್ಷ್ಮಿ ಕೂಡ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

 ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸಂಕೇಶ್ವರ ಠಾಣೆಯ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ನಡೆಸಿದ ಸತತ ಕಾರ್ಯಾಚರಣೆಯ ಫಲವಾಗಿ ತಾಯಿ ಲಕ್ಷ್ಮಿ ಅವರ ಶವ ಪತ್ತೆಯಾಗಿದ್ದು, ಬಾಲಕ ಸುಪ್ರೀತ್ ಶವಕ್ಕಾಗಿ ಶೋಧ ಕಾರ್ಯ ಇನ್ನೂ ಮುಂದುವರಿದಿದೆ. ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Tags:

error: Content is protected !!