Chikkodi

ರಾಯಬಾಗ ಕ್ಷೇತ್ರದಲ್ಲಿ 1 ಕೋಟಿ ರೂ. ವೆಚ್ಚದ ವಿವಿಧ ರಸ್ತೆ ಕಾಮಗಾರಿಗಳಿಗೆ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಚಾಲನೆ

Share

ರಾಯಬಾಗ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಒಟ್ಟು 1 ಕೋಟಿ ರೂಪಾಯಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ಭೂಮಿಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ಕ್ಷೇತ್ರದ ಕರೋಶಿ, ಬಂಬಲವಾಡ, ನಾಗರಮುನ್ನೂಳಿ ಹಾಗೂ ಉಮರಾಣಿ ಗ್ರಾಮಗಳಲ್ಲಿ ಈ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಇಂದು ಪೂಜೆ ನೆರವೇರಿಸಲಾದ ರಸ್ತೆ ಕಾಮಗಾರಿಗಳಲ್ಲಿ ಕೆಲವು ಸಂಸದರ ನಿಧಿಯಿಂದ ಹಾಗೂ ಇನ್ನು ಕೆಲವು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಸಹಕಾರದೊಂದಿಗೆ ಪಿಡಬ್ಲ್ಯೂಡಿ ಇಲಾಖೆಯಿಂದ ಮಂಜೂರಾಗಿವೆ. ಮುಂದಿನ ತಿಂಗಳು ಪಂಚಾಯಿತಿ ಚುನಾವಣೆಗಳು ಬರಲಿರುವುದರಿಂದ, ನೀತಿ ಸಂಹಿತೆ ಜಾರಿಯಾಗಿ ಜನರ ಹಿತದೃಷ್ಟಿಯ ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಿಯಾಗಬಾರದೆಂಬ ಉದ್ದೇಶದಿಂದ ತಕ್ಷಣವೇ ಭೂಮಿಪೂಜೆ ನೆರವೇರಿಸಿ ಕೆಲಸ ಆರಂಭಿಸಲಾಗುತ್ತಿದೆ. ಅನುದಾನದ ಕೊರತೆಯಿರುವ ಪಂಚಾಯಿತಿಗಳಿಗೂ ಸಂಸದರ ನಿಧಿಯಿಂದ ಸಾಧ್ಯವಾದಷ್ಟು ನೆರವು ನೀಡಲಾಗುತ್ತಿದೆ ಎಂದು ತಿಳಿಸಿದರು.

ರಾಯಬಾಗ ಕಾಂಗ್ರೆಸ್ ಮುಖಂಡ ಮಹಾವೀರ ಮೊಹಿತೆ, ಸಂಸದರು ಅಧಿಕಾರಕ್ಕೆ ಬಂದಾಗಿನಿಂದ ಕ್ಷೇತ್ರದಲ್ಲಿ ಸುಮಾರು 100 ರಿಂದ 150 ಕೋಟಿ ರೂ. ವರೆಗಿನ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಕಳೆದ 20–25 ವರ್ಷಗಳಲ್ಲಿ ಇಷ್ಟೊಂದು ಪ್ರಮಾಣದ ಕೆಲಸ ಆಗಿಲ್ಲ. ಅಭಿವೃದ್ಧಿ ವಿಚಾರವಾಗಿ ಎಲ್ಲಿ ಬೇಕಾದರೂ ಚರ್ಚೆಗೆ ನಾವು ಸಿದ್ಧರಿದ್ದೇವೆ ಎಂದರು.

ರಾಯಬಾಗ ಮತಕ್ಷೇತ್ರಕ್ಕೆ ‘ನಿರಂತರ ಜ್ಯೋತಿ’ ಯೋಜನೆಗಾಗಿ 25 ಲಕ್ಷ ರೂ. ಅನುದಾನ ನೀಡಲಾಗಿದೆ. ಪ್ರಸ್ತುತ ಎದುರಾಗಿರುವ ಬರಗಾಲ ಹಾಗೂ ಕುಡಿಯುವ ನೀರಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಸಂಸದರು, ಅಗತ್ಯವಿರುವೆಡೆ ಟ್ಯಾಂಕರ್ ಮೂಲಕ ನೀರು ಪೂರೈಸಲು ತಹಶೀಲ್ದಾರ್ ಮತ್ತು ಉಪವಿಭಾಗಾಧಿಕಾರಿಗಳೊಂದಿಗೆ ಚರ್ಚಿಸಿ ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ಮಹಾವೀರ ಮೊಹಿತೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರಾದ ಶಿವು ಮರ್ಯಾಯಿ, ಕರೆಪ್ಪಾ ಇಟನಾಳೆ, ಕೃಷ್ಣಾ ಜೂಗೂಳೆ, ರಾಜು ಕೋಟಗಿ, ಶಂಕರಗೌಡ ಪಾಟೀಲ, ಸಂಜು ಕಾಂಬಳೆ, ಭೀಮಪ್ಪ ಕಾಂಬಳೆ, ಮಂಜುನಾಥ ಘೇವಾರೆ, ಸಿದ್ದಲಿಂಗ ಮಾಂಜರಿ, ಸುನೀಲ ಪಾಟೀಲ, ಸಾಬೀರ ಪಟೇಲ್, ನಿರ್ಮಲಾ ಪಾಟೀಲ ಸೇರಿದಂತೆ ಅನೇಕ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Tags:

error: Content is protected !!