ಕಾಲುವೆ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಂಡ ರೈತರಿಗೆ ನ್ಯಾಯಾಲಯದ ಆದೇಶದಂತೆ ಹೆಚ್ಚುವರಿ ಪರಿಹಾರ ನೀಡಲು ವಿಫಲವಾದ ಹಿನ್ನೆಲೆಯಲ್ಲಿ ಚಿಕ್ಕೋಡಿ ನೀರಾವರಿ ಇಲಾಖೆ ಕಚೇರಿಯ ಪೀಠೋಪಕರಣಗಳನ್ನು ನ್ಯಾಯಾಲಯದ ಸಿಬ್ಬಂದಿ ಇಂದು ಜಪ್ತಿ ಮಾಡಿದ್ದಾರೆ.

2002ರಲ್ಲಿ ಕಾಲುವೆ ನಿರ್ಮಾಣ ಕಾಮಗಾರಿಗಾಗಿ ನೀರಾವರಿ ಇಲಾಖೆಯು ನಿಪ್ಪಾಣಿ ತಾಲೂಕಿನ ಮತ್ತೆವಾಡಿ ಮತ್ತು ಕುಗನೊಳ್ಳಿ ಗ್ರಾಮದ ರೈತರಿಂದ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತ್ತು. ಆದರೆ, ಇಲಾಖೆ ನೀಡಿದ್ದ ಪರಿಹಾರ ತೃಪ್ತಿಕರವಾಗಿಲ್ಲದ ಕಾರಣ, ಹೆಚ್ಚಿನ ಪರಿಹಾರಕ್ಕಾಗಿ ರೈತರು ನ್ಯಾಯಾಲಯದ ಮೆಟ್ಟಿಲೇರಿದ್ದರು.
ಪ್ರಕರಣದ ವಿಚಾರಣೆ ನಡೆಸಿದ್ದ ಬೆಳಗಾವಿಯ ಭೂಸ್ವಾಧೀನ ಪ್ರಾಧಿಕಾರ ಟ್ರಿಬುನಲ್ ಕೋರ್ಟ್, 2023ರಲ್ಲಿ ರೈತರ ಪರವಾಗಿ ತೀರ್ಪು ನೀಡಿತ್ತು. ಒಂದು ಪ್ರಕರಣದಲ್ಲಿ ರೈತರಿಗೆ ಒಟ್ಟು 15 ಲಕ್ಷ ರೂಪಾಯಿಗಳ ಹೆಚ್ಚುವರಿ ಪರಿಹಾರವನ್ನು ನೀಡುವಂತೆ ನೀರಾವರಿ ಇಲಾಖೆಗೆ ಆದೇಶಿಸಿತ್ತು.
2023ರಲ್ಲಿ ನ್ಯಾಯಾಲಯ ಆದೇಶ ನೀಡಿದ್ದರೂ ಸಹ, ನೀರಾವರಿ ಇಲಾಖೆ ಅಧಿಕಾರಿಗಳು ಇಲ್ಲಿಯವರೆಗೂ ರೈತರಿಗೆ ಬಾಕಿ ಪರಿಹಾರದ ಹಣವನ್ನು ಪಾವತಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಜಪ್ತಿ ವಾರಂಟ್ ಜಾರಿಗೊಳಿಸಿತ್ತು.
ಅದರಂತೆ ಇಂದು ಚಿಕ್ಕೋಡಿ ಪಟ್ಟಣದಲ್ಲಿರುವ ನೀರಾವರಿ ಇಲಾಖೆ ಕಚೇರಿಗೆ ತೆರಳಿದ ಕೋರ್ಟ್ ಸಿಬ್ಬಂದಿ ಹಾಗೂ ವಕೀಲರು, ಕಚೇರಿಯಲ್ಲಿದ್ದ ಕಂಪ್ಯೂಟರ್ಗಳು, ಕುರ್ಚಿಗಳು, ಟೇಬಲ್ಗಳು ಹಾಗೂ ಟ್ರೆಜರಿ ಸೇರಿದಂತೆ ಎಲ್ಲಾ ಪ್ರಮುಖ ಪೀಠೋಪಕರಣಗಳನ್ನು ಜಪ್ತಿ ಮಾಡಿ ವಶಕ್ಕೆ ಪಡೆದಿದ್ದಾರೆ.
