ಒಂದು ಸಣ್ಣ ಸಂಸ್ಥೆಯಾಗಿ ಆರಂಭವಾದ ಜೊಲ್ಲೆ ಸಮೂಹ ಇಂದು ಸಹಕಾರ, ಬ್ಯಾಂಕಿಂಗ್, ಶಿಕ್ಷಣ, ಆತಿಥ್ಯ, ಸಕ್ಕರೆ ಉದ್ಯಮ ಹಾಗೂ ಸೂಪರ್ ಮಾರ್ಕೆಟ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತನ್ನ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಿಕೊಂಡು ಆಲದ ಮರದಂತೆ ಬೆಳೆದಿದೆ. ಎಂಟು ದಿಕ್ಕುಗಳಲ್ಲಿ ತನ್ನ ಅಸ್ತಿತ್ವ ವಿಸ್ತರಿಸಿರುವ ಈ ಸಮೂಹದ ಬೆಳವಣಿಗೆಯ ಹಿಂದೆ ಅಣ್ಣಾಸಾಹೇಬ ಜೊಲ್ಲೆ ಅವರ ದೂರದೃಷ್ಟಿ ಮತ್ತು ಸಮಾಜಮುಖಿ ಚಿಂತನೆ ಪ್ರಮುಖವಾಗಿವೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಅಶೋಕ ದಳವಾಯಿ ಹೇಳಿದರು.

ತಾಲೂಕಿನ ಯಕ್ಸಂಬಾ ನನದಿ ಶಾಲೆಯ ಆವರಣದಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ಅವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಭಜನ್ ಭಾರತ್ ಕಾರ್ಯಕ್ರಮ ಹಾಗೂ ಜೊಲ್ಲೆ ಧ್ವನಿ ಎಫ್ಎಂ ರೇಡಿಯೋ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸುಮಾರು 25 ವರ್ಷಗಳ ಹಿಂದೆ ಆರಂಭವಾದ ಜೊಲ್ಲೆ ಸಮೂಹ ಇಂದು ಕರ್ನಾಟಕದ ಗಡಿ ಭಾಗವಷ್ಟೇ ಅಲ್ಲದೆ ಮಹಾರಾಷ್ಟ್ರ, ಗೋವಾ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಬೆಳೆದಿರುವುದು ಗಮನಾರ್ಹ. ಶ್ರದ್ಧೆ, ಬದ್ಧತೆ ಮತ್ತು ದೂರದೃಷ್ಟಿಯಿಂದ ಒಬ್ಬ ವ್ಯಕ್ತಿ ಸಮಾಜದಲ್ಲಿ ಎಂತಹ ಬದಲಾವಣೆ ತರಬಹುದು ಎಂಬುದಕ್ಕೆ ಅಣ್ಣಾಸಾಹೇಬ ಜೊಲ್ಲೆ ಅವರ ಸಾಧನೆ ಮಾದರಿಯಾಗಿದೆ. ಅವರನ್ನು ಕೇವಲ ಉದ್ಯಮಿ ಅಥವಾ ರಾಜಕಾರಣಿಯಾಗಿ ನೋಡದೆ, ಸಮಾಜದ ವಿವಿಧ ವರ್ಗಗಳ ಬಗ್ಗೆ ಕಾಳಜಿಯುಳ್ಳ ವ್ಯಕ್ತಿಯಾಗಿ ಗುರುತಿಸಬೇಕು ಎಂದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಜೊಲ್ಲೆ ಸಮೂಹದ ಪ್ರಯತ್ನ ಶ್ಲಾಘನೀಯ. ದೇಶದ ಆರ್ಥಿಕತೆಯ ಮೂಲವಾಗಿರುವ ಕೃಷಿಯ ಅಭಿವೃದ್ಧಿಗೂ ಹೆಚ್ಚಿನ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಆರಂಭಿಸಿರುವ ಎಫ್ಎಂ ರೇಡಿಯೋ ಕೇಂದ್ರ ರೈತರಿಗೆ ವೈಜ್ಞಾನಿಕ ಕೃಷಿ ಪದ್ಧತಿ, ಸಮಗ್ರ ಕೃಷಿ, ಮಿಶ್ರ ಬೆಳೆ, ನೀರಿನ ಸದ್ಬಳಕೆ, ಮಣ್ಣಿನ ಆರೋಗ್ಯ ಹಾಗೂ ಕೀಟಬಾಧೆ ನಿಯಂತ್ರಣದ ಕುರಿತು ಮಾಹಿತಿ ನೀಡುವ ಪರಿಣಾಮಕಾರಿ ಮಾಧ್ಯಮವಾಗಬೇಕು ಎಂದು ಹೇಳಿದರು.
ಯುವಜನರು ಸ್ವಾವಲಂಬಿಗಳಾಗಲು ಕೌಶಲ ಅಭಿವೃದ್ಧಿ, ವೃತ್ತಿಪರ ತರಬೇತಿ ಹಾಗೂ ಸ್ವಯಂ ಉದ್ಯೋಗದ ಅವಕಾಶಗಳ ಕುರಿತು ರೇಡಿಯೋ ಮೂಲಕ ಮಾರ್ಗದರ್ಶನ ನೀಡಬೇಕು.ಮಹಿಳೆಯರಲ್ಲಿ ಆತ್ಮವಿಶ್ವಾಸ ಮತ್ತು ಸ್ವಾವಲಂಬನೆ ಬೆಳೆಸುವ ಜತೆಗೆ ಆರೋಗ್ಯ, ಪೌಷ್ಟಿಕತೆ, ರಕ್ತಹೀನತೆ ನಿವಾರಣೆ ಹಾಗೂ ಸ್ವಸಹಾಯ ಸಂಘಗಳ ಚಟುವಟಿಕೆಗಳ ಕುರಿತು ಜಾಗೃತಿ ಮೂಡಿಸಬೇಕು. ಸ್ಥಳೀಯ ಕಲೆ, ಸಂಸ್ಕೃತಿ, ಜನಪದ ಪರಂಪರೆ ಮತ್ತು ಗ್ರಾಮೀಣ ಬದುಕಿನ ಮೌಲ್ಯಗಳನ್ನು ಉಳಿಸುವಲ್ಲಿಯೂ ಎಫ್ಎಂ ಕೇಂದ್ರ ಪ್ರಮುಖ ಪಾತ್ರ ವಹಿಸಬೇಕು ಎಂದು ಆಶಿಸಿದರು.
ಕನೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ಎಲ್ಲರನ್ನು ಜೊತೆಯಲ್ಲಿ ಕೊಂಡೊಯ್ಯುವ ಹಾಗೂ ಬಡವರ ಸಂಕಷ್ಟಗಳಿಗೆ ಸ್ಪಂದಿಸುವ ವ್ಯಕ್ತಿಗಳು ಜನಮಾನಸದಲ್ಲಿ ಸದಾ ಉಳಿಯುತ್ತಾರೆ. ಅಣ್ಣಾಸಾಹೇಬ ಜೊಲ್ಲೆ ಮತ್ತು ಶಾಸಕಿ ಶಶಿಕಲಾ ಜೊಲ್ಲೆ ದಂಪತಿಯ ಸಮಾಜಮುಖಿ ಸೇವಾ ಕಾರ್ಯಗಳು ಶ್ಲಾಘನೀಯವಾಗಿವೆ. ಬೀರೇಶ್ವರ ಸಂಸ್ಥೆಯ ಮೂಲಕ ಆರ್ಥಿಕ ನೆರವು ಒದಗಿಸುವುದರ ಜತೆಗೆ ಸಮಾಜದ ವಿವಿಧ ವರ್ಗಗಳ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಇತರರಿಗೆ ಮಾದರಿಯಾಗಿದೆ ಎಂದರು.
ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ ಜೊಲ್ಲೆ ಕುಟುಂಬ ಜನರ ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿರಲಿದೆ ಎಂದು ಭರವಸೆ ನೀಡಿದರು.
ವೇದಿಕೆಯಲ್ಲಿ ಹುಕ್ಕೇರಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ. .ಸದಲಗಾದ ಶ್ರದ್ಧಾನಂದ ಸ್ವಾಮೀಜಿ. ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ, ಜ್ಯೋತಿಪ್ರಸಾದ ಜೊಲ್ಲೆ, ಪ್ರಿಯಾ ಜೊಲ್ಲೆ, ಸಂಪಾದನಾ ಸ್ವಾಮೀಜಿ, ಯೋಗಾನಂದ ಸ್ವಾಮೀಜಿ, ಗೋಪಾಲ ಸ್ವಾಮೀಜಿ, ಮಹಾಂತೇಶ ಜೀವನಾವರ, ಈರಣ್ಣ ಕಡಾಡಿ, ಸಿದ್ರಾಮ ನಾಡಗೌಡ, ಜಯಕುಮಾರ ಖೋತ, ಎಂ.ಪಿ. ಪಾಟೀಲ, ರಾಜೇಂದ್ರ ಪಾಟೀಲ, ಅಪ್ಪಾಸಾಹೇಬ ಜೊಲ್ಲೆ, ಬಸಗೌಡ ಪಾಟೀಲ, ಬಾಬುರಾವ್ ಮಾಳಿ, ವಿಶ್ವನಾಥ ಪೇಟಕರ, ಲಕ್ಷ್ಮಣ ಕಬಾಡೆ, ಮಂಗಲಾ ಜೊಲ್ಲೆ, ಆರತಿ ಪೋತದಾರ, ರಾಘವೇಂದ್ರ ಉಡುಪಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಜೊಲ್ಲೆ ಗ್ರೂಪ್ ಉಪಾಧ್ಯಕ್ಷ ಬಸವಪ್ರಸಾದ ಜೊಲ್ಲೆ ಸ್ವಾಗತಿಸಿದರು.
