Chikkodi

ಚಿಕ್ಕೋಡಿಯ ಚನ್ಯಾನದಡ್ಡಿ ಘಟ್ಟದ ಕಾಡಿನಲ್ಲಿ ಮಹಿಳೆಯ ಭೀಕರ ಕೊಲೆ ಪ್ರಕರಣ ಬಯಲು: ಪ್ರಿಯಕರನ ಬಂಧನ

Share

ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಪ್ರಿಯಕರನೇ ಪ್ರೇಯಸಿಯನ್ನು ಕೊಲೆ ಮಾಡಿ, ಶವವನ್ನು ಕಾಡಿನಲ್ಲಿ ಎಸೆದು ಪರಾರಿಯಾಗಿದ್ದ ಭೀಕರ ಘಟನೆ ಚಿಕ್ಕೋಡಿ–ಬೆಳಗಾವಿ ರಸ್ತೆಯ ಚನ್ಯಾನದಡ್ಡಿ ಘಟ್ಟದ ಅರಣ್ಯ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

ತಾಲೂಕಿನ ನನದಿ ಗ್ರಾಮದ (ನನದಿ ವಾಡಿ) ನಿವಾಸಿ ಐರಾವತಿ ಸಂಜಯ ಖೋತ (38) ಕೊಲೆಯಾದ ದುರ್ದೈವಿ. ಬಾಗಲಕೋಟೆ ಜಿಲ್ಲೆಯ ನರೇನೂರು ಎಲ್‌ಟಿ-2 ಮೂಲದವನಾಗಿದ್ದು, ಪ್ರಸ್ತುತ ಯಾದಗೂಡಿನಲ್ಲಿ ವಾಸವಿದ್ದ ಸಂಜಯ ಚವ್ಹಾಣ (28) ಬಂಧಿತ ಆರೋಪಿ.

ಕೊಲೆಯಾದ ಮಹಿಳೆ ಹಾಗೂ ಅವಿವಾಹಿತನಾಗಿರುವ ಆರೋಪಿ ಸಂಜಯ ಚವ್ಹಾಣ ನಡುವೆ ಅನೈತಿಕ ಸಂಬಂಧವಿತ್ತು ಎನ್ನಲಾಗಿದೆ. ನವೆಂಬರ್ 14ರಂದು ತೋರಣಹಳ್ಳಿ ಗ್ರಾಮಕ್ಕೆ ದೇವರ ದರ್ಶನಕ್ಕೆಂದು ಮನೆಯಿಂದ ತೆರಳಿದ್ದ ಮಹಿಳೆ ನಂತರ ನಾಪತ್ತೆಯಾಗಿದ್ದರು. ಈ ಕುರಿತು ಕುಟುಂಬಸ್ಥರು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

ಪ್ರಕರಣದ ಜಾಡು ಹಿಡಿದ ಚಿಕ್ಕೋಡಿ ಪೊಲೀಸರು, ಮಹಿಳೆಯ ಕಾಲ್ ಡೀಟೇಲ್ ರೆಕಾರ್ಡ್ ಆಧಾರದ ಮೇಲೆ ಆರೋಪಿ ಸಂಜಯನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದಾಗ ಕೊಲೆ ರಹಸ್ಯ ಬಯಲಾಗಿದೆ. ಯಾದಗೂಡಿನ ಧಾಬಾವೊಂದರಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಆರೋಪಿಯು, ತೋರಣಹಳ್ಳಿಗೆ ಬಂದಿದ್ದ ಮಹಿಳೆಯನ್ನು ಭೇಟಿಯಾಗಿ ಚನ್ಯಾನದಡ್ಡಿ ಘಟ್ಟದ ರಸ್ತೆಯ ಪಕ್ಕದ ಅರಣ್ಯ ಪ್ರದೇಶಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ ಕಲ್ಲು ಮತ್ತು ಬಿಯರ್ ಬಾಟಲಿಯಿಂದ ಬರ್ಬರವಾಗಿ ಹಲ್ಲೆ ನಡೆಸಿ ಕೊಲೆಗೈದು, ಸುಮಾರು ಅರ್ಧ ಕಿಲೋಮೀಟರ್ ದೂರದ ದಟ್ಟ ಕಾಡಿನೊಳಗೆ ಶವವನ್ನು ಎಸೆದು ಪರಾರಿಯಾಗಿದ್ದಾಗಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ.

ಆರೋಪಿಯನ್ನು ಘಟನಾ ಸ್ಥಳಕ್ಕೆ ಕರೆದೊಯ್ದ ಚಿಕ್ಕೋಡಿ ಸಿಪಿಐ ವಿಶ್ವನಾಥ ಚೌಗುಲೆ ಹಾಗೂ ಪಿಎಸ್‌ಐ ಶಿವಕುಮಾರ್ ಬಿರಾದಾರ ನೇತೃತ್ವದ ತಂಡ ಶೋಧ ನಡೆಸಿದಾಗ, ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದ ಮಹಿಳೆಯ ಅಸ್ಥಿಪಂಜರ (ಮೂಳೆಗಳು) ಹಾಗೂ ಆಕೆ ಧರಿಸಿದ್ದ ಸೀರೆ ಮತ್ತು ಇತರ ವಸ್ತುಗಳು ಪತ್ತೆಯಾಗಿವೆ. ಬೆಳಗಾವಿಯ ವಿಧಿವಿಜ್ಞಾನ ಪ್ರಯೋಗಾಲಯದ (FSL) ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸಿದೆ.

ಮೃತ ಮಹಿಳೆ ಪತಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆಯಿಂದ ಚಿಕ್ಕೋಡಿ, ಕರೋಶಿ, ನನದಿ, ನನದಿ ವಾಡಿ ಹಾಗೂ ಎಕ್ಸಂಬಾ ಸುತ್ತಮುತ್ತಲಿನ ಗ್ರಾಮಗಳಲ್ಲಿ ತೀವ್ರ ಆತಂಕ ಮತ್ತು ಸಂಚಲನ ಮೂಡಿದೆ. ಚಿಕ್ಕೋಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Tags:

error: Content is protected !!