ಸಮಾಜದಲ್ಲಿ ಸಮಾನ ಗೌರವ, ಹಕ್ಕುಗಳ ಜಾಗೃತಿ ಹಾಗೂ ಮೂಲಭೂತ ಸೌಲಭ್ಯಗಳಿಗಾಗಿ ಆಗ್ರಹಿಸಿ ಬೆಳಗಾವಿಯಲ್ಲಿ ಎಲ್ಜಿಬಿಟಿಕ್ಯೂ (LGBTQ) ಸಮುದಾಯದವರು ಬೃಹತ್ ಪ್ರೈಡ್ ರ್ಯಾಲಿಯನ್ನು ನಡೆಸಿದ್ದಾರೆ. ಒಂದೆಡೆ ಸುಪ್ರೀಂ ಕೋರ್ಟ್ ತೀರ್ಪಿಗೆ ಕೃತಜ್ಞತೆ ಸಲ್ಲಿಸುತ್ತಾ ಜಾಗೃತಿ ಜಾಥಾ ನಡೆಸಿದರೆ, ಮತ್ತೊಂದೆಡೆ ತಮಗೆ ವಸತಿ ಹಾಗೂ ಸರ್ಕಾರಿ ದಾಖಲೆಗಳನ್ನು ನೀಡದೆ ಅಲೆದಾಡಿಸಲಾಗುತ್ತಿದೆ ಎಂದು ಆಳುವ ಸರ್ಕಾರಗಳ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಬೆಳಗಾವಿಯ ಕನ್ನಡ ಸಾಹಿತ್ಯ ಭವನದ ಆವರಣದಲ್ಲಿ ವಿವಿಧ ಗಣ್ಯರಿಂದ ಚಾಲನೆ ಪಡೆದ ಪ್ರೈಡ್ ರ್ಯಾಲಿಯು, ರಾಣಿ ಚೆನ್ನಮ್ಮ ವೃತ್ತದಿಂದ ಕುಮಾರಗಂಧರ್ವ ಕಲಾಮಂದಿರದವರೆಗೆ ಅದ್ಧೂರಿಯಾಗಿ ಸಾಗಿತು. ಕಳೆದ ಭಾನುವಾರ ಆಯೋಜಿಸಿದ್ದ ‘ರೈಡ್ ಫಾರ್ ಪ್ರೈಡ್’ ಕಾರ್ಯಕ್ರಮದ ಮುಂದುವರಿದ ಭಾಗವಾಗಿ ನಡೆದ ಈ ಜಾಥಾದಲ್ಲಿ, ಸುಪ್ರೀಂ ಕೋರ್ಟ್ನ ಇತ್ತೀಚಿನ ಸಕಾರಾತ್ಮಕ ತೀರ್ಪಿಗೆ ಧನ್ಯವಾದ ಸಲ್ಲಿಸುವ ಜೊತೆಗೆ ಸಮಾಜದಲ್ಲಿನ ಎಲ್ಜಿಬಿಟಿಕ್ಯೂ ಹಕ್ಕುಗಳು ಮತ್ತು ಸಮಸ್ಯೆಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು. ಇದೇ ವೇಳೆ ಪ್ರತಿಭಟನೆ ನಡೆಸಿದ ತೃತೀಯ ಲಿಂಗಿ ಸಮುದಾಯದ ಸದಸ್ಯರು, ಬದುಕಲು ಸೂಕ್ತ ವಸತಿ (ಆಶ್ರಯ), ಗುರುತಿಗಾಗಿ ಆಧಾರ್ ಮತ್ತು ರೇಷನ್ ಕಾರ್ಡ್ಗಳನ್ನು ಕಲ್ಪಿಸುವಂತೆ ಒತ್ತಾಯಿಸಿದರು.
ಯಾವುದೇ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದರೂ ತಮ್ಮ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂದು ಕಿಡಿಕಾರಿದ ಪ್ರತಿಭಟನಾಕಾರರು, ದಾಖಲೆಗಳಿಗಾಗಿ ಅಧಿಕಾರಿಗಳು ತಿಂಗಳುಗಟ್ಟಲೆ ಅಲೆದಾಡಿಸುತ್ತಿದ್ದು ಸುಪ್ರೀಂ ಕೋರ್ಟ್ ಆದೇಶವಿದ್ದರೂ ಸ್ಥಳೀಯವಾಗಿ ನ್ಯಾಯ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡರು. ಸರ್ಕಾರ ನೀಡುವ ಅಲ್ಪ ಸಹಾಯಧನದಿಂದ ಮನೆ ಬಾಡಿಗೆ ಹಾಗೂ ವೈದ್ಯಕೀಯ ಖರ್ಚು ನಿಭಾಯಿಸುವುದು ಅಸಾಧ್ಯವಾಗಿದ್ದು, ಬೆಳಗಾವಿ ಅಧಿವೇಶನದ ಸಂದರ್ಭದಲ್ಲೂ ತಮ್ಮ ಕೂಗು ಕೇಳುವವರಿಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ರೈತ, ಮಹಿಳಾ ಹಾಗೂ ಆಶಾ ಕಾರ್ಯಕರ್ತರ ಹೋರಾಟಗಳಿಗೆ ನಾವು ಬೆಂಬಲ ನೀಡಿದರೂ ನಮ್ಮ ಕಷ್ಟಕ್ಕೆ ಯಾರೂ ನಿಲ್ಲುತ್ತಿಲ್ಲ; ಜೊತೆಗೆ ಕೆಲವು ನಕಲಿ ವ್ಯಕ್ತಿಗಳ ಕೃತ್ಯದಿಂದ ಇಡೀ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತಿದ್ದು, ಸರ್ಕಾರ ಕೂಡಲೇ ತಮಗೆ ಸೂರು ಹಾಗೂ ಮೂಲಭೂತ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿದರು.
ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ತೃತೀಯ ಲಿಂಗಿಯರು ಭಾಗಿಯಾಗಿದ್ಧರು.
