“ಹಾವೇರಿಯ ಮೆಡಿಕಲ್ ಕಾಲೇಜನ್ನು ಸಂತ ಕನಕದಾಸರ ಮೆಡಿಕಲ್ ಕಾಲೇಜು ಎಂದು ಮರುನಾಮಕರಣ ಮಾಡಲಾಗುವುದು. ಆ ಮೂಲಕ ಕನಕದಾಸರ ಹೆಸರನ್ನು ಶಾಶ್ವತವಾಗಿ ಉಳಿಸಲಾಗುವುದು. ಕಾಗಿನೆಲೆ ಶ್ರೀಗಳ ಬೇಡಿಕೆಯಂತೆ ವಿದ್ಯಾರ್ಥಿ ನಿಲಯಕ್ಕೆ 5 ಕೋಟಿ ರೂ. ಅನುದಾನ ನೀಡಲಾಗುವುದು. ಭೂಮಿಯ ಕುರಿತು ನೀಡಲಾಗಿರುವ ಬೇಡಿಕೆಯನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಘೋಷಿಸಿದರು.

ಸುಕ್ಷೇತ್ರ ಕಾಗಿನೆಲೆಯಲ್ಲಿ ನಡೆದ ಭಕ್ತ ಶ್ರೇಷ್ಠ ಕನಕದಾಸರ ಜಯಂತ್ಯೋತ್ಸವವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
“ಕನಕ ಎಂದರೆ ಚಿನ್ನ. ಕನಕದಾಸರದ್ದು ಚಿನ್ನದಂತ ಗುಣ. ಭಕ್ತಿಯಿಂದ ದೇವರನ್ನು ಗೆದ್ದವರು ಕನಕದಾಸರು. ಇದಕ್ಕೆ ಉಡುಪಿಯೇ ಸಾಕ್ಷಿ. ಶ್ರೀಕೃಷ್ಣ ಪರಮಾತ್ಮನ ಮೂರ್ತಿ ಕನಕದಾಸರ ಭಕ್ತಿಗೆ ಮೆಚ್ಚಿ ದರ್ಶನ ನೀಡಿದ್ದೇ ಸಾಕ್ಷಿಗುಡ್ಡೆಯಾಗಿ ನಿಂತಿದೆ. ತಮ್ಮನ್ನು ದೇವಾಲಯದ ಒಳಗೆ ಬಿಡದೇ ಹೋದಾಗ ಕನಕದಾಸರು ಜಗಳ ಮಾಡಲಿಲ್ಲ. ತಮ್ಮ ಭಕ್ತಿಯ ಶಕ್ತಿಯಿಂದ ಶ್ರೀಕೃಷ್ಣನನ್ನು ತಮ್ಮತ್ತ ತಿರುಗಿಸಿಕೊಂಡರು. ನಾನು ಶ್ರೀಗಳು ಚರ್ಚೆ ಮಾಡುತ್ತಿರುವಾಗ ಕನಕದಾಸರು ವಿಜಯನಗರ ಸಾಮ್ರಾಜ್ಯದಲ್ಲಿ ಸೇನಾಧಿಕಾರಿಯಾಗಿದ್ದರು ಎಂದು ಚರ್ಚೆ ಮಾಡಿದೆವು. ಯುದ್ಧಭೂಮಿಯಲ್ಲಿ ಹೋರಾಟ ಮಾಡಿದ ಅವರು, ಕೀರ್ತನೆಗೆ ಬದುಕನ್ನು ಮುಡಿಪಾಗಿಟ್ಟು, ಕೀರ್ತನೆ ಮೂಲಕವೇ ಶಾಂತಿ, ನೆಮ್ಮದಿ ತೋರಿಸಿಕೊಟ್ಟವರು. ಅರಸ, ರಾಜಕಾರಣಿಗೆ ಧರ್ಮ ಹಾಗೂ ಮಾತಿನಲ್ಲಿ ಮರ್ಮ ಇರಬೇಕು ಎಂದು ತೋರಿಸಿಕೊಟ್ಟರು” ಎಂದು ತಿಳಿಸಿದರು.
“ಪುರಂದರದಾಸರು, ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ, ಪದುಭನಾಭನ ಪಾದ ಭಜನೆ ಪರಮ ಸುಖವಯ್ಯ ಎಂದು ಹೇಳಿದ್ದಾರೆ. ಅದರಂತೆ ಈ ಪವಿತ್ರವಾದ ಸ್ಥಳದಲ್ಲಿ ಮೊದಲ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಕನಕ ಜಯಂತಿ ಆಚರಿಸುವ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ. ಕನಕದಾಸರು ಹಾಕಿಕೊಟ್ಟಿರುವ ಸಮಾನತೆಯ ಹಾದಿಯಲ್ಲಿ ಕಾಗಿನೆಲೆ ಪೀಠದ ಶ್ರೀಗಳು ಸಮಾಜವನ್ನು ಮುನ್ನಡೆಸುತ್ತಿದ್ದು, ಅವರಿಗೆ ಅಭಿನಂದನೆ ಸಲ್ಲಿಸುವೆ. ಕಾಗಿನೆಲೆ ಕನಕದಾಸರ ಪುಣ್ಯಸ್ಥಳ. ಇಂತಹ ಭೂಮಿಯಲ್ಲಿ ನಾವೆಲ್ಲರೂ ಸೇರಿರುವುದು ನಮ್ಮ ಪುಣ್ಯ” ಎಂದರು.
ಕೀರ್ತನೆ ಮೂಲಕ ಜಾತಿಯ ವಿಷ ಬೀಜ ಕಿತ್ತುಹಾಕಲು ಶ್ರಮಿಸಿದ ಮಹಾನ್ ಕ್ರಾಂತಿಕಾರಿ ಕನಕದಾಸರು

“ಕನಕ ಜಯಂತಿಯಂದು ಕನಕದಾಸರ ಐಕ್ಯ ಸ್ಥಳಕ್ಕೆ ಭೇಟಿ ನೀಡಿ ನಮನ ಸಲ್ಲಿಸುವ ಭಾಗ್ಯ ಸಿಕ್ಕಿದೆ. ಕನಕದಾಸರು ಕೀರ್ತನೆ ಮೂಲಕ ಜಾತಿಯ ವಿಷ ಬೀಜ ಕಿತ್ತುಹಾಕಲು ಶ್ರಮಿಸಿದ ಮಹಾನ್ ಕ್ರಾಂತಿಕಾರಿ. ಕುಲದ ಹೆಸರಿನಲ್ಲಿ ತಾರತಮ್ಯ ಬೇಡ ಎಂದು ಸಂದೇಶ ನೀಡಿದರು. ಬಸವಣ್ಣ ಕೇವಲ ಲಿಂಗಾಯತರಿಗೆ, ಕನಕದಾಸರು ಕೇವಲ ಕುರುಬರಿಗೆ, ಅಂಬೇಡ್ಕರ್ ಅವರು ಪರಿಶಿಷ್ಟ ಸಮುದಾಯದವರಿಗೆ ಮಾತ್ರ ಸೀಮಿತವಲ್ಲ. ಧರ್ಮ ಯಾವುದಾದರೂ ತತ್ವ ಒಂದೇ, ನಾಮ ನೂರಾದರೂ ದೈವ ಒಂದೇ, ಕರ್ಮ ಹಲವಾದರೂ ನಿಷ್ಠೆ ಒಂದೇ, ಪೂಜೆ ಯಾವುದಾದರೂ ಭಕ್ತಿ ಒಂದೆ, ದೇವನೊಬ್ಬ ನಾಮ ಹಲವು. ಆತ್ಮಕ್ಕೆ ಕುಲವಿಲ್ಲ” ಎಂದು ತಿಳಿಸಿದರು.
ಕನಕದಾಸರ ಸಂದೇಶದಂತೆ ಅನ್ನಭಾಗ್ಯ ಯೋಜನೆ ಜಾರಿ
“ನಾವು ಮಾಡುವುದು ಹೊಟ್ಟೆ, ಬಟ್ಟೆಗಾಗಿ ಎಂಬುದನ್ನು ಅರಿಯಬೇಕು. ಕನಕದಾಸರು ಹಾಕಿಕೊಟ್ಟ ಸಮಾನತೆ ಹಾದಿಯನ್ನು ನಾವು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಕನಕದಾಸರು ಕನ್ನಡ ನಾಡಿನ ಹೆಮ್ಮೆ. ಕನ್ನಡ ಸಾಹಿತ್ಯದ ಅಮೂಲ್ಯ ರತ್ನ. ಹಸಿದು ಬಂದವರಿಗೆ ಅನ್ನ ನೀಡಿ ಎಂದು ಬುದ್ಧಿಮಾತು ಹೇಳಿದವರು. ಅವರ ಮಾತಿನಂತೆ ಸಿದ್ದರಾಮಯ್ಯ ಅವರು ತಾವು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಮೊದಲ ದಿನ ಬಸವ ಜಯಂತಿಯಂದು ಅನ್ನಭಾಗ್ಯ ಯೋಜನೆಗೆ ಅನುಮೋದನೆ ನೀಡಿದರು. ಆಮೂಲಕ ರಾಜ್ಯದಲ್ಲಿ ಯಾರೂ ಹಸಿವಿನಿಂದ ಇರಬಾರದು ಎಂದು ತೀರ್ಮಾನ ಮಾಡಿದರು. ನಮ್ಮ ಸರ್ಕಾರ ಈಗಲೂ ಅದನ್ನು ಮುಂದುವರಿಸಿಕೊಂಡು ಬಂದಿದೆ. ರಾಜ್ಯದ 4.21 ಕೋಟಿ ಜನರಿಗೆ ಅನ್ನಭಾಗ್ಯ ಯೋಜನೆ ನೀಡುತ್ತಿದ್ದು, ಇದಕ್ಕಾಗಿ ವಾರ್ಷಿಕ 8,500 ಕೋಟಿ ರೂ. ಅನುದಾನ ನೀಡುತ್ತಿದ್ದೇವೆ” ಎಂದು ವಿವರಿಸಿದರು.
“ಕರ್ನಾಟಕದ ಜನ ಹಸಿವಿನಿಂದ ಇರಬಾರದು, ಬೆಲೆ ಏರಿಕೆ ಸಮಯದಲ್ಲಿ ಜನರ ಆರ್ಥಿಕ ಹೊರೆ ಇಳಿಸಲು ನಾನು ಹಾಗೂ ಸಿದ್ದರಾಮಯ್ಯ ಅವರು ಚರ್ಚೆ ಮಾಡಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆವು. ಆಮೂಲಕ 136 ಸ್ಥಾನಗಳೊಂದಿಗೆ ನಮಗೆ ಶಕ್ತಿ ನೀಡಿದ ನಿಮಗೆ ನೆರವಾಗಿ, ನಾವು ನುಡಿದಂತೆ ನಡೆದಿದ್ದೇವೆ. ನಮ್ಮ ಸರ್ಕಾರ ಈಗ ರೈತರಿಗಾಗಿ ನೇಗಿಲ ಯೋಗಿ, ತೇಗ ಸಿರಿ ಸೇರಿದಂತೆ ರೈತರ ಪರವಾಗಿ ಕ್ರಾಂತಿಕಾರಿ ಯೋಜನೆ ಘೋಷಣೆ ಮಾಡಿದೆ” ಎಂದರು.
ಭಕ್ತಿ, ಕನಕದಾಸರ ಸಾಧನವಾದರೆ, ಸಮಾನತೆ ಅವರ ಸಂದೇಶ
“ಭಕ್ತಿ, ಕನಕದಾಸರ ಸಾಧನವಾದರೆ, ಸಮಾನತೆ ಅವರ ಸಂದೇಶವಾಗಿತ್ತು. ಮರಕ್ಕೆ ಬೇರು ಎಷ್ಟು ಮುಖ್ಯವೋ, ಮನುಷ್ಯನಿಗೆ ನಂಬಿಕೆ ಕೂಡ ಅಷ್ಟೇ ಮುಖ್ಯ. ಕನ್ನಡದ ದಾಸ ಸಾಹಿತ್ಯದಲ್ಲಿ, ಭಕ್ತಿಯ ಭಾವಸಾಗರವನ್ನು ಕನಕದಾಸರ ಕೀರ್ತನೆಯಲ್ಲಿ ನೋಡಿದ್ದೇವೆ. ನಾನು ಕನಕದಾಸರ ಸಂದೇಶವನ್ನು ಅಳವಡಿಸಿಕೊಂಡಿರುವೆ. ಬಟ್ಟೆಯನ್ನು ನೀರಿನಲ್ಲಿ ನೆನೆಸಿ ಧರಿಸಿದರೆ ಅದು ಮಡಿಯಲ್ಲ. ನಮ್ಮ ಆಸೆಗಳನ್ನು ತ್ಯಾಗ ಮಾಡಿದಾಗ ಅದಕ್ಕೆ ಗೌರವ ಬರುತ್ತದೆ. ಅಮ್ಮನ ನೆನಪು ಪ್ರೀತಿಯ ಮೂಲ, ಗುರುವಿನ ನೆನಪು ಜ್ಞಾನದ ಮೂಲ, ದೇವರ ನೆನಪು ಭಕ್ತಿಯ ಮೂಲ, ಈ ಮೂರರ ನೆನಪು ಮನುಷ್ಯತ್ವಕ್ಕೆ ಮೂಲ, ಮನುಷ್ಯತ್ವ ಮೋಕ್ಷಕ್ಕೆ ಮೂಲ. ದಾನ ಧರ್ಮ ಮಾಡಿದ ಸುಖಿಯಾದ ಮನವೇ, ಹೀನ ಬುದ್ಧಿಯ ಬಿಟ್ಟು ನಲಿದಾಡು ಮನವೇ ಎಂಬ ಉಪದೇಶವನ್ನು ಮರೆಯಲು ಸಾಧ್ಯವಿಲ್ಲ” ಎಂದರು.
“ನಮ್ಮ ವೀರ ಗಂಗಾಧರ ಅಜ್ಜಯ್ಯ ಅವರು ನಮಗೆ ಒಂದು ಸಂದೇಶ ನೀಡಿದ್ದು, ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಹೇಳಿದ್ದಾರೆ. ಆಮೂಲಕ ಮಾನವೀಯತೆ ಸಂದೇಶ ಸಾರಿದ್ದಾರೆ. ವಿಜಯನಗರ ಸಾಮ್ರಾಜ್ಯದಲ್ಲಿ ಕನಕದಾಸರ ಇತಿಹಾಸವೂ ಇದೆ. 300ಕ್ಕೂ ಹೆಚ್ಚು ಕೀರ್ತನೆ ರಚಿಸಿ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಲು ನೀಡಿದ್ದಾರೆ. ಸಮಾಜ ಸೇವೆಗೆ ಅವರದೇ ಆದ ಸಂದೇಶ ನೀಡಿದ್ದು, ಇದೇ ಕಾಂಗ್ರೆಸ್ ಸರ್ಕಾರದ ಧ್ಯೇಯವಾಗಿದೆ. ಅಕ್ಷರಗಳ ಮೂಲಕ ಅರಿವು ನೀಡಿ, ಕೀರ್ತನೆಗಳ ಮೂಲಕ ಭಕ್ತಿ ಬೆಳೆಸಿ, ವಿಚಾರಗಳ ಮೂಲಕ ಸಮಾಲೋಚನೆ ಜಾಗೃತಿ ಮೂಡಿಸಿದ ಮಹಾನ್ ಚೇತನ ಕನಕದಾಸರು” ಎಂದು ಸ್ಮರಿಸಿದರು.
“ಗ್ಯಾರಂಟಿ ಯೋಜನೆಗಳು ಸರ್ವರಿಗೂ ಸಮಬಾಳು, ಸಮಪಾಲು ಎಂಬ ತತ್ವದ ಮೇಲೆ ರಚಿತವಾಗಿದೆ. ಎಲ್ಲರ ಹೊಟ್ಟೆ, ಬಟ್ಟೆ ತುಂಬಲು ನಮ್ಮ ಸರ್ಕಾರ ಮುಂದಾಗಿದೆ. ಶ್ರೀಗಳು ಅನೇಕ ಬೇಡಿಕೆಗಳನ್ನು ನನ್ನ ಮುಂದೆ ಇಟ್ಟಿದ್ದಾರೆ. ಇಲ್ಲಿ ಉತ್ತಮ ವಿದ್ಯಾರ್ಥಿ ನಿಲಯ ನಿರ್ಮಾಣ ಮಾಡುವ ಬೇಡಿಕೆ ಇಟ್ಟಿದ್ದಾರೆ. ನಾನು ಇಲ್ಲಿಗೆ ಬಂದ ನಂತರ ಏನಾದರೂ ಕೊಟ್ಟು ಹೋಗಬೇಕು. ಈ ಪುಣ್ಯಕ್ಷೇತ್ರದಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ 35 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಿದ್ದು, ಅನೇಕ ನಿಗಮಗಳ ಮೂಲಕ ಅನುದಾನ ನೀಡಿದ್ದೇವೆ. ನನ್ನ ಹೆಜ್ಜೆ ಗುರುತು ರಾಜ್ಯಕ್ಕೆ ದೊಡ್ಡ ಸಂದೇಶ ನೀಡಲು ಸಾಕ್ಷಿಯಾಗಬೇಕು. ಇಂದು ಕನಕದಾಸರ ಪುತ್ಥಳಿ ಅನಾವರಣ ಮಾಡಿದ್ದೇನೆ” ಎಂದು ತಿಳಿಸಿದರು.
ಕನಕದಾಸರ ಸಮಾನತೆಯ ತತ್ವವನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು
“ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣದ ಪ್ರವೇಶದಲ್ಲಿ 15% ಮೀಸಲಾತಿ ನೀಡಲಾಗುತ್ತಿತ್ತು. ಇದರಲ್ಲಿ 7.5% ಅನ್ನು ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳಿಗೆ ನೀಡಲು ಸರ್ಕಾರ ತೀರ್ಮಾನಿಸಿದೆ. ಪ್ರತಿ ವರ್ಷ ಸರ್ಕಾರದ ವತಿಯಿಂದ ಕನಕ ಉತ್ಸವ ಆಚರಿಸುತ್ತಿದ್ದೇವೆ. ಕನಕದಾಸರ ಕರ್ಮಭೂಮಿ ಕಾಗಿನೆಲೆಯನ್ನು ಜಾಗತಿಕ ಮಟ್ಟದ ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸುವುದು ನಮ್ಮೆಲ್ಲರ ಜವಾಬ್ದಾರಿ. ಈ ನಿಟ್ಟಿನಲ್ಲಿ ಶ್ರೀಗಳು ಹಾಗೂ ಸಮಿತಿ ಜತೆ ಚರ್ಚಿಸಿ ತೀರ್ಮಾನ ಮಾಡಲಾಗುವುದು. ಕನಕದಾಸರು ಮನುಕುಲದ ಆಸ್ತಿ. ನಾವು ಕೇವಲ ಅವರ ಭಾವಚಿತ್ರಕ್ಕೆ ಪೂಜೆ ಮಾಡುವುದಷ್ಟೇ ಅಲ್ಲ. ಅವರ ಸಮಾನತೆಯ ತತ್ವವನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು” ಎಂದು ಕರೆ ನೀಡಿದರು.
ನೀರಾವರಿ ಯೋಜನೆಗಳಿಗೆ ಜಿಲ್ಲೆಯ ಶಾಸಕರುಗಳ ಆದ್ಯತೆ
“ಈ ಜಿಲ್ಲೆಯಲ್ಲಿ 7 ಶಾಸಕರನ್ನು ನೀಡಿ ರಾಜ್ಯಕ್ಕೆ ದೊಡ್ಡ ಸಂದೇಶ ನೀಡಿದ್ದೀರಿ. ಈ ಎಲ್ಲಾ ಶಆಸಕರು ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಬ್ಯಾಡಗಿ ಕ್ಷೇತ್ರದ ಶಾಸಕರು ಗುಡ್ಡದ ಮಲ್ಲಾಪುರ ಏತ ನೀರಾವರಿ ಯೋಜನೆ ಮೂಲಕ 137 ಕೆರೆಗಳಿಗೆ ನೀರು ತುಂಬಿಸಲು ಅರ್ಜಿ ನೀಡಿದ್ದರು. ನಾವು ಅದರಲ್ಲಿ ಈಗಾಗಲೇ 115 ಕೋಟಿಗೂ ಹೆಚ್ಚು ಅನುದಾನಕ್ಕೆ ಅನುಮೋದನೆ ನೀಡಲಾಗಿದೆ. ಜಿಲ್ಲೆಯ ಇತರೆ ಶಾಸಕರು ತಮ್ಮ ಕ್ಷೇತ್ರದ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಿದ್ದಾರೆ. ಬರಗಾಲದಲ್ಲಿ ನಾವೆಲ್ಲರೂ ತತ್ತರಿಸಿದ್ದೇವೆ. ಕೇಂದ್ರ ಸರ್ಕಾರ ಬರ ಪರಿಹಾರ ನೀಡದೇ ಇದ್ದರೂ ಪ್ರತಿ ರೈತರ ಖಾತೆಗೆ 5 ಸಾವಿರ ಬರ ಪರಿಹಾರ ನೀಡಲು ನಮ್ಮ ಸರ್ಕಾರ ಮುಂದಾಗಿದೆ” ಎಂದು ತಿಳಿಸಿದರು.
“ಕಾಗಿನೆಲೆ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ರೂಪಿಸಲು ಚಿಂತನೆ ನಡೆಸಲಾಗಿದೆ. ಶ್ರೀಗಳು ಅಧಿಕಾರಿಗಳ ವಿಚಾರ ಪ್ರಸ್ತಾಪಿಸಿದರು. ಅವರಿಗೆ ಯಾವ ರೀತಿ ನ್ಯಾಯ ಒದಗಿಸಲು ಸಾಧ್ಯ ಎಂಬುದನ್ನು ಚಿಂತನೆ ನಡೆಸಲಾಗುವುದು. ಸಿದ್ದರಾಮಯ್ಯ ಅವರ ಕೆಳಗೆ ನಾನು ಕೆಲಸ ಮಾಡಿದ್ದು, ಅವರ ಸರ್ಕಾರದ ಅವಧಿಯಲ್ಲಿ ಕಿಂಚಿತ್ತು ಲೋಪ ಬಾರದಂತೆ ಬಂಡೆಯಾಗಿ ನಿಂತಿದ್ದೆ. ಅವರು ನಮ್ಮ ಪಕ್ಷದ ಹಿರಿಯ ನಾಯಕರ ಆದೇಶದಂತೆ ನನಗೆ ಅಧಿಕಾರ ಹಸ್ತಾಂತರ ಮಾಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಾವು ಸಾಗುತ್ತೇವೆ. ಅವರ ಕೈಬಲಪಡಿಸುವುದು ನಮ್ಮ ಕರ್ತವ್ಯ ಎಂದು ಭಾವಿಸಿ ನನ್ನ ಸೇವೆ ಮುಂದುವರಿಸುತ್ತಿದ್ದೇವೆ. ಸಿದ್ದರಾಮಯ್ಯನವರು ಹಾಕಿಕೊಟ್ಟ ಹಾದಿಯಲ್ಲಿ ನನ್ನದೇ ಆದ ಹೊಸ ಚಿಂತನೆಯಲ್ಲಿ ನಮ್ಮ ಸರ್ಕಾರ ಮುಂದುವರಿಯುತ್ತಿದ್ದು, ನೀವೆಲ್ಲರೂ ಜಾತಿ, ಧರ್ಮ, ಪಕ್ಷ ಬೇಧ ಮರೆತು ನಮಗೆ ಮತ್ತೆ ಆಶೀರ್ವಾದ ಮಾಡಬೇಕು. ಪ್ರಜಾಸೇವಕನಾಗಿ ನನ್ನ ಅಧಿಕಾರ ಅವಧಿಯಲ್ಲಿ ಎಲ್ಲಾ ಜಾತಿ, ಧರ್ಮದವರನ್ನು ಸಮಾನವಾಗಿ ಕೊಂಡೊಯ್ಯುವ ಕೆಲಸ ಮಾಡಲಾಗುವುದು. ನನ್ನನ್ನು ನಾಡಿನ ದೊರೆ, ರಾಜ ಎಂದು ಕರೆಯುವುದಕ್ಕಿಂತ ಪ್ರಜಾ ಸೇವಕ ಎಂದು ಕರೆಯಬೇಕು. ನಿಮ್ಮ ಸೇವಕನಾಗಿ ಪ್ರಾಮಾಣಿಕವಾಗಿ ನನ್ನ ಕೆಲಸ ಮುಂದುವರಿಸುವೆ” ಎಂದು ತಿಳಿಸಿದರು.
ಕನಕದಾಸರಿಗೆ ಜಾತಿಯ ಬಣ್ಣ ಬಳಿಯಬೇಡಿ
ಹಾವೇರಿ ಜಿಲ್ಲೆಯ ಕೊಳ್ಳಿ ಪಾಲಿಟೆಕ್ನಿಕ್ ಆವರಣ ಹೆಲಿಪ್ಯಾಡ್ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, “ಸಂತ ಕನಕದಾಸರನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸದೆ, ಅವರ ತತ್ವ ಮತ್ತು ಸಂದೇಶಗಳನ್ನು ಎಲ್ಲರೂ ಗೌರವಿಸಬೇಕು. ಕನಕದಾಸರಿಗೆ ಜಾತಿಯ ಲೇಪ ಹಚ್ಚಬೇಡಿ. ಅವರು ಭಕ್ತಿಯ ಮೂಲಕ ಕೃಷ್ಣನನ್ನೇ ಒಲಿಸಿಕೊಂಡು ಎಲ್ಲ ವರ್ಗದವರಿಗೂ ಮಾರ್ಗದರ್ಶನ ನೀಡಿದ ಮಹನೀಯರು. ಕನಕದಾಸರು ಏನು ಹೇಳಿದ್ದಾರೆ? ಜಾತಿ, ಜಾತಿ ಎನ್ನುವುದನ್ನು ಮೊದಲು ಬಿಡಿ ಎಂದು ನಮಗೆ ಕಿವಿಮಾತು ಹೇಳಿದ್ದಾರೆ. ಭಕ್ತಿಯಿಂದ ಕೃಷ್ಣನನ್ನೇ ಒಲಿಸಿಕೊಂಡ ಅವರು ಎಲ್ಲ ವರ್ಗದವರಿಗೂ ಮಾರ್ಗದರ್ಶನ ನೀಡಿದ್ದಾರೆ. ಅಂಥವರನ್ನು ಜಾತಿಯ ಚೌಕಟ್ಟಿನಲ್ಲಿ ನೋಡುವುದು ಸರಿಯಲ್ಲ” ಎಂದರು.
ಕಾರ್ಯಕ್ರಮಕ್ಕೆ ದಿಢೀರ್ ಯೋಜನೆ ರೂಪಿಸಲಾಗಿದೆಯೇ ಎಂಬ ಪ್ರಶ್ನೆಗೆ, “ಯಾವುದೇ ದಿಢೀರ್ ಯೋಜನೆ ಇಲ್ಲ. ನಿನ್ನೆ ನಾವು ಸಂವಿಧಾನ ದಿನ ಆಚರಿಸಿದ್ದೇವೆ. ಬೆಂಗಳೂರಿನಲ್ಲೂ ಆಚರಣೆ ಮಾಡುತ್ತಿದ್ದೇವೆ. ನನ್ನ ಮಠದ ಶ್ರೀಗಳು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರು ಎಲ್ಲರೂ ಇಂದು ಬರಬೇಕು ಎಂದು ಆಹ್ವಾನಿಸಿದ್ದರು. ಹೀಗಾಗಿ ಬಂದಿದ್ದೇನೆ” ಎಂದು ಹೇಳಿದರು.
ಸಚಿವ ಸ್ಥಾನ ಸಿಗದಿದ್ದಕ್ಕೆ ಅನ್ಯಾಯವೇ?
ಉತ್ತರ ಕರ್ನಾಟಕ ಭಾಗದಲ್ಲಿ ಕುರುಬ ಸಮಾಜದ ಜನಸಂಖ್ಯೆ ಹೆಚ್ಚಿದ್ದರೂ ಸಚಿವ ಸ್ಥಾನ ನೀಡಿಲ್ಲ. ಇದರಿಂದ ಸಮಾಜಕ್ಕೆ ಅನ್ಯಾಯವಾಗಿದೆ ಎಂಬ ಅಸಮಾಧಾನವಿದೆ ಎಂದು ಕೇಳಿದಾಗ, “ನೀವು ಹೇಳುತ್ತಿದ್ದೀರಷ್ಟೇ. ಮೊದಲು ಏನಿತ್ತು? ಹಿಂದೆ ಏನಾದರೂ ಇತ್ತಾ? ಈಗ ಪ್ರಬಲ ಆಕಾಂಕ್ಷಿಗಳಿದ್ದಾರೆ. ಸಮಾಜದಲ್ಲಿ ಹಲವು ಗಣ್ಯರು ಹಾಗೂ ನಾಯಕರು ಇದ್ದಾರೆ. ಈ ವಿಚಾರ ನನಗೂ ಗೊತ್ತಿದೆ. ಶಿವಣ್ಣ ಅವರನ್ನು ನಾನೇ ಕಾಂಗ್ರೆಸ್ ಪಕ್ಷಕ್ಕೆ ಕರೆತಂದು ಸೋನಿಯಾ ಗಾಂಧಿ ಅವರ ಬಳಿ ಕರೆದೊಯ್ದಿದ್ದೆ” ಎಂದು ಹೇಳಿದರು.
ವರದಾ-ಬೇಡ್ತಿ ನದಿ ಜೋಡಣೆ ಡಿಪಿಆರ್ಗೆ ಸಹಮತಿ
ವರದಾ-ಬೇಡ್ತಿ ನದಿ ಜೋಡಣೆ ಯೋಜನೆಯ ವಿಸ್ತೃತ ಯೋಜನಾ ವರದಿ (ಡಿಪಿಆರ್) ಕುರಿತು ಕೇಳಿದ ಪ್ರಶ್ನೆಗೆ, “ನಾವು ಈಗಾಗಲೇ ನಮ್ಮ ಸಹಮತಿಯನ್ನು ನೀಡಿದ್ದೇವೆ. ಆ ಪ್ರಕ್ರಿಯೆ ಅದರ ಪಾಡಿಗೆ ನಡೆಯುತ್ತಿದೆ. ಈ ಸಂಬಂಧ ಮೂವರು ಮುಖ್ಯಮಂತ್ರಿಗಳು ಮಾತನಾಡಿದ್ದೇವೆ. ಕೇಂದ್ರ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಬೇಕಾದ ಕೆಲವು ವಿಚಾರಗಳಿವೆ” ಎಂದು ತಿಳಿಸಿದರು.
ಆಶಾ ಕಾರ್ಯಕರ್ತೆಯರ ವಿಚಾರದಲ್ಲಿ ಸಂಘಟನೆಗಳ ಒತ್ತಡ
ಆಶಾ ಕಾರ್ಯಕರ್ತೆಯರ ಸಭೆ ಕುರಿತು ಕೇಳಿದಾಗ, “ನೋಡೋಣ. ಅವರಿಗೆ ಏನೇನು ಹೇಳುತ್ತಿದ್ದೇನೋ ಬಹುಶಃ ಅವರಿಗೆ ಅರ್ಥವಾಗಿದೆ. ಆದರೆ ಕೆಲವು ನಾಯಕರು ಮತ್ತು ಸಂಘಟನೆಗಳ ಒತ್ತಡದಿಂದಾಗಿ ಪಾಪ, ಅವರೆಲ್ಲ ಹೀಗೆ ಇದ್ದಾರೆ. ಅವರೆಲ್ಲರೂ ಒಳ್ಳೆಯ ಜನ” ಎಂದರು.
