Belagavi

ಕುಸಮಳಿ ಮಹಾಲಕ್ಷ್ಮೀ ದೇವಿಗೆ ಬೆಳ್ಳಿ ಕಿರೀಟ ಸಮರ್ಪಣೆ: ಫೇಸ್‌ಬುಕ್ ಫ್ರೆಂಡ್ಸ್ ಸರ್ಕಲ್‌ನಿಂದ ಭಕ್ತಿಪೂರ್ವಕ ಸೇವೆ!

Share

ಸಾಮಾಜಿಕ ಜಾಲತಾಣ ಕೇವಲ ಮನರಂಜನೆಗೆ ಮಾತ್ರವಲ್ಲ, ಧಾರ್ಮಿಕ ಹಾಗೂ ಸಾಮಾಜಿಕ ಸೇವೆಗೂ ವೇದಿಕೆಯಾಗಬಲ್ಲದು ಎಂಬುದನ್ನು ಬೆಳಗಾವಿಯ ಫೇಸ್‌ಬುಕ್ ಫ್ರೆಂಡ್ಸ್ ಸರ್ಕಲ್ ತಂಡ ಸಾಬೀತುಪಡಿಸಿದೆ. ಖಾನಾಪುರ ತಾಲೂಕಿನ ಕುಸ್ಮಳಿ ಮಹಾಲಕ್ಷ್ಮಿ ದೇವಿಗೆ ಬೆಳಗಾವಿಯ ಉದ್ಯಮಿಗಳು ಭವ್ಯವಾದ ಬೆಳ್ಳಿ ಕಿರೀಟವನ್ನು ಸಮರ್ಪಿಸಿದ್ದಾರೆ.

ಖಾನಾಪುರ ತಾಲೂಕಿನ ಕುಸಮಳಿ ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಕಳೆದ ಐದು ವರ್ಷಗಳಿಂದ ನಡೆಯುತ್ತಿದ್ದು, ಇದೀಗ ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ದೇವಿಯು ಶೀಘ್ರದಲ್ಲೇ ಮೂಲ ಗರ್ಭಗುಡಿಗೆ ಮರಳಲಿದ್ದಾರೆ. ಈ ಶುಭ ಸಂದರ್ಭದಲ್ಲಿ ಬೆಳಗಾವಿಯ ಉದ್ಯಮಬಾಗ್‌ನ ಆರ್‌ಇಸಿ ಫ್ಲೋ ಟೆಕ್ನಾಲಜೀಸ್ ಎಲ್‌ಎಲ್‌ಪಿ ಸಂಸ್ಥಾಪಕರಾದ ಉದ್ಯಮಿ ಮಧು ರುಕಮಣ್ಣ ಹಾಶೀಲಕರ್ ಹಾಗೂ ಜ್ಯೋತಿ ಮಧು ಹಾಶೀಲಕರ್ ದಂಪತಿ ದೇವಿಗೆ ಭವ್ಯವಾದ ಬೆಳ್ಳಿ ಕಿರೀಟವನ್ನು ಸಮರ್ಪಿಸಿದ್ದಾರೆ. ಬೆಳಗಾವಿಯ ‘ಫೇಸ್‌ಬುಕ್ ಫ್ರೆಂಡ್ಸ್ ಸರ್ಕಲ್’ ತಂಡದ ಮುಖ್ಯಸ್ಥ ಸಂತೋಷ್ ಆರ್. ದರೇಕರ್ ಅವರು ಸಾಮಾಜಿಕ ಜಾಲತಾಣದ ಮೂಲಕ ದಾನಿಗಳು, ಉದ್ಯಮಿಗಳು ಮತ್ತು ಭಕ್ತರನ್ನು ಒಗ್ಗೂಡಿಸಿ ಈ ಮಹತ್ಕಾರ್ಯಕ್ಕೆ ಚಾಲನೆ ನೀಡಿದ್ದರು.

ಸಂತೋಷ್ ದರೇಕರ್ ಅವರ ಮನವಿಗೆ ಸ್ಪಂದಿಸಿದ ಹಲವು ದಾನಿಗಳು ದೇವಸ್ಥಾನದ ವಿವಿಧ ಸೇವೆಗಳಿಗೆ ಕೈಜೋಡಿಸಿದ್ದಾರೆ. ಸದಾನಂದ ತೇರಗಾಂವ್ಕರ್ ದಂಪತಿ 10 ಕೆ.ಜಿ. ತೂಕದ ದೇವಸ್ಥಾನದ ಗಂಟೆ, ಶಹಾಪುರದ ಸಿಂಧೂರ್ ಸಿಲ್ಕ್ಸ್ ಮಾಲೀಕ ಸುನಿಲ್ ಧೋಂಗಡಿ ದೇವಿಗೆ ರೇಷ್ಮೆ ಸೀರೆ ಹಾಗೂ ಸಂಜಯ್ ಅನವೇಕರ್, ವಂದನಾ ಸಂಗವಯ್ಯ, ರಾಜು ಕಾಕತಿ, ನಕುಲ್ ತುಮರಿ, ವಿಶ್ವಾಸ್ ತುಮರಿ, ವಿಶಾಲ್ ತೋನನ್ನವರ್, ವೀಣಾ ಮಿರಜ್ಕರ್ ಮತ್ತು ಲಕ್ಷ್ಮೀ ಸೊರಟೂರ ಅವರು ಮಹಾಪ್ರಸಾದಕ್ಕೆ ಅಗತ್ಯವಿರುವ ದಿನಸಿ ಹಾಗೂ ತರಕಾರಿಗಳ ನೆರವು ನೀಡಿದ್ದಾರೆ. ಭಕ್ತಿ ಸೇವೆಯಾಗಿ ಬದಲಾದಾಗ ಪ್ರತಿಯೊಂದು ಕಾಣಿಕೆಯೂ ದೇವರ ಪಾದಾರವಿಂದಗಳಿಗೆ ಸಲ್ಲುತ್ತದೆ ಎಂದು ಸಂತೋಷ್ ದರೇಕರ್ ಎಲ್ಲಾ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

Tags:

error: Content is protected !!