Delhi

ನವದೆಹಲಿಯಲ್ಲಿ ಬಿಜೆಪಿಯ ಮಹತ್ವದ ರಾಷ್ಟ್ರೀಯ ಚಿಂತನ ಸಭೆ; ತೆಲಂಗಾಣ ರಾಜ್ಯ ಸಹಪ್ರಭಾರಿ ಶಾಸಕ ಅಭಯ್ ಪಾಟೀಲ್ ಭಾಗಿ

Share

ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಘಟನಾತ್ಮಕ ಬಲವರ್ಧನೆ ಹಾಗೂ ಮುಂದಿನ ರಾಜಕೀಯ ಕಾರ್ಯತಂತ್ರಗಳ ರೂಪುರೇಷೆ ಸಿದ್ಧಪಡಿಸುವ ನಿಟ್ಟಿನಲ್ಲಿ, ಪಕ್ಷದ ವತಿಯಿಂದ ನವದೆಹಲಿಯ ಪೂಸಾ (PUSA) ಕ್ಯಾಂಪಸ್‌ನಲ್ಲಿ ನವೆಂಬರ್ 27ರ ಶುಕ್ರವಾರದಿಂದ ನವೆಂಬರ್ 28ರ ಶನಿವಾರದವರೆಗೆ ಎರಡು ದಿನಗಳ ಮಹತ್ವದ ‘ರಾಷ್ಟ್ರೀಯ ಚಿಂತನ ಸಭೆ’ಯನ್ನು ಆಯೋಜಿಸಲಾಗಿದೆ.


ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ನಿತಿನ್ ನಬಿನ್ ಜೀ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಈ ಉನ್ನತ ಮಟ್ಟದ ಸಭೆಯಲ್ಲಿ, ದೇಶದ ಹೆಮ್ಮೆಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಕೇಂದ್ರ ಗೃಹ ಸಚಿವರಾದ ಅಮಿತ್ ಶಾಹ ಸೇರಿದಂತೆ ಪಕ್ಷದ ರಾಷ್ಟ್ರ ಮಟ್ಟದ ಉನ್ನತ ನಾಯಕರು, ಕೇಂದ್ರ ಸಚಿವರು, ರಾಷ್ಟ್ರೀಯ ಪದಾಧಿಕಾರಿಗಳು, ವಿವಿಧ ರಾಜ್ಯಗಳ ಅಧ್ಯಕ್ಷರು ಹಾಗೂ ಪ್ರಭಾರಿಗಳು ಭಾಗವಹಿಸಿ ಮಾರ್ಗದರ್ಶನ ನೀಡಲಿದ್ದಾರೆ.
ಈ ಮಹತ್ವದ ರಾಷ್ಟ್ರೀಯ ಚಿಂತನ ಸಭೆಯಲ್ಲಿ ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಬಿಜೆಪಿ ತೆಲಂಗಾಣ ರಾಜ್ಯ ಸಹಪ್ರಭಾರಿಯಾಗಿರುವ (State Co-Incharge) ಅಭಯ್ ಪಾಟೀಲ್ ಅವರು ವಿಶೇಷವಾಗಿ ಪಾಲ್ಗೊಂಡಿದ್ದಾರೆ.

ಎರಡು ದಿನಗಳ ಕಾಲ ವಿವಿಧ ಅಧಿವೇಶನಗಳಲ್ಲಿ ನಡೆಯಲಿರುವ ಈ ಸಭೆಯಲ್ಲಿ ಮುಂಬರುವ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಸಿದ್ಧತೆ, ಬೂತ್ ಮಟ್ಟದಿಂದ ಪಕ್ಷವನ್ನು ಮತ್ತಷ್ಟು ಸದೃಢಗೊಳಿಸುವುದು, ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವುದು ಹಾಗೂ ತೆಲಂಗಾಣ ಸೇರಿದಂತೆ ದೇಶಾದ್ಯಂತ ಪಕ್ಷದ ಸಂಘಟನಾತ್ಮಕ ವಿಸ್ತರಣೆಯ ಕುರಿತು ಸುದೀರ್ಘ ಚರ್ಚೆ ಮತ್ತು ಚಿಂತನ-ಮಂಥನ ನಡೆಯಲಿದೆ.

Tags:

error: Content is protected !!