ಪಂಚಮಸಾಲಿ ಸೇರಿದಂತೆ ಲಿಂಗಾಯತ ಉಪಸಮುದಾಯಗಳಿಗೆ 2A ಮೀಸಲಾತಿ ಹಾಗೂ ಕೇಂದ್ರದ OBC ಪಟ್ಟಿಗೆ ಸೇರ್ಪಡೆಗೊಳಿಸುವಂತೆ ಒತ್ತಾಯಿಸಿ, ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಡಿಸೆಂಬರ್ 10 ರಂದು ಒಂದು ದಿನದ ರಾಜ್ಯಮಟ್ಟದ ಉಪವಾಸ ಸತ್ಯಾಗ್ರಹಕ್ಕೆ ಕರೆ ನೀಡಿದ್ದಾರೆ. ಬೆಳಗಾವಿಯ ಸುವರ್ಣ ವಿಧಾನಸೌಧದ ಮುಂಭಾಗದಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಈ ಬೃಹತ್ ಧರಣಿ ನಡೆಯಲಿದ್ದು, ಸಮುದಾಯದ ಶಾಸಕರಿಗೂ ಶ್ರೀಗಳು ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
ಪಂಚಮಸಾಲಿ, ಮಲೆಗೌಡ, ಗೌಡ ಲಿಂಗಾಯತ, ದೀಕ್ಷಾ ಹಾಗೂ ಚತುರ್ಥ ಲಿಂಗಾಯತ ಸಮುದಾಯಗಳ ಮಕ್ಕಳ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ರಾಜ್ಯ ಸರ್ಕಾರ 2A ಮೀಸಲಾತಿ ನೀಡಬೇಕು ಹಾಗೂ ಎಲ್ಲಾ ಒಳಪಂಗಡಗಳನ್ನು ಕೇಂದ್ರದ OBC ಪಟ್ಟಿಗೆ ಸೇರಿಸಲು ಶಿಫಾರಸು ಮಾಡಬೇಕೆಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದ್ದಾರೆ. ಕಳೆದ ಆರು ವರ್ಷಗಳ ಹೋರಾಟವನ್ನು ಸರ್ಕಾರ ನಿರ್ಲಕ್ಷಿಸಬಾರದು ಎಂಬ ಎಚ್ಚರಿಕೆಯೊಂದಿಗೆ ಡಿಸೆಂಬರ್ 10ರಂದು ಸುವರ್ಣ ವಿಧಾನಸೌಧದ ಎದುರು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದ್ದು, ಕಳೆದ ವರ್ಷ ಹೋರಾಟಗಾರರ ಮೇಲೆ ನಡೆದ ಲಾಠಿಚಾರ್ಜ್ ಖಂಡಿಸಿ ಅಂದಿನ ದಿನವನ್ನು ‘ಲಿಂಗಾಯತರ ಮೇಲಿನ ದೌರ್ಜನ್ಯ ದಿನ’ವನ್ನಾಗಿ ಆಚರಿಸಲಾಗುವುದು ಎಂದು ತಿಳಿಸಿದ್ದಾರೆ. ಪ್ರತಿ ಮನೆಯಿಂದ ಒಬ್ಬರು ಹಾಗೂ ಪ್ರತಿ ಹಳ್ಳಿಯಿಂದ ಒಂದು ವಾಹನದಂತೆ ಸಾವಿರಾರು ಸಂಖ್ಯೆಯಲ್ಲಿ ಸಮುದಾಯದ ಬಂಧುಗಳು ಪಾಲ್ಗೊಳ್ಳಬೇಕು, ಅನಾರೋಗ್ಯ ಇರುವವರು ನೀರು ಕುಡಿದು ಧರಣಿಯಲ್ಲಿ ಭಾಗವಹಿಸಬಹುದು ಎಂದು ಸ್ವಾಮೀಜಿ ಕರೆ ನೀಡಿದ್ದಾರೆ. ಇದೇ ವೇಳೆ ಸಮುದಾಯದ ಹಾಲಿ ಮತ್ತು ಮಾಜಿ ಶಾಸಕರಿಗೆ ಖಡಕ್ ಎಚ್ಚರಿಕೆ ನೀಡಿರುವ ಸ್ವಾಮೀಜಿ, ಪಕ್ಷಭೇದ ಮರೆತು ಅಧಿವೇಶನದ ಒಳಗೆ ಮೀಸಲಾತಿ ಪರ ಧ್ವನಿ ಎತ್ತಬೇಕು, ಇಲ್ಲವೇ ಹೋರಾಟದ ವೇದಿಕೆಗೆ ಬಂದು ಬೆಂಬಲ ಸೂಚಿಸಬೇಕು; ತಪ್ಪಿದಲ್ಲಿ ಜನರ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ ಎಂದಿದ್ದಾರೆ.
